

ಉಡುಪಿ: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕನೊಬ್ಬ ಕುಸಿದು ಬಿದ್ದು ಸಾವಿಗೀಡಾಗಿರುವ ಮನಕಲಕುವ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಸುಕೇಶ್ ಮೃತ ದುರ್ದೈವಿ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸುಕೇಶ್, ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದರು. ಎಂದಿನಂತೆಯೇ ಊರಿನ ಸ್ನೇಹಿತರ ಜತೆಗೂಡಿ ಕ್ರಿಕೆಟ್ ಆಡುತ್ತಿದ್ದರು.
ಬೌಲಿಂಗ್ ಮಾಡುವಾಗ ಎದೆ ನೋವು ಕಾಣಿಸಿಕೊಂಡು ಸುಕೇಶ್ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸುಕೇಶ್ ಅವರನ್ನು ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಅವರು ಅಸುನೀಗಿದ್ದಾರೆ. ಸುಕೇಶ್ಗೆ ಹೃದಯಾಘಾತ ಆಗಿದೆ ಎಂದು ಹೇಳಲಾಗಿದೆ.
ಸುಕೇಶ್ ಅಕಾಲಿಕ ಮರಣದಿಂದ ಇದೀಗ ನಂದಳಿಕೆ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಆಳೆತ್ತರ ಬೆಳೆದು ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. (ದಿಗ್ವಿಜಯ ನ್ಯೂಸ್)