ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದಿದ್ದಕ್ಕೆ ಕೋಪಗೊಂಡ ಸಂಸದೆ ಸುಮಲತಾ ಮಾಡಿದ್ದು ಹೀಗೆ...

Sumalatha
Published on

ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ vs ಜೆಡಿಎಸ್ ಸಮರ ಮುಂದುವರಿದಿದೆ. ನಾಲೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ ವೇಳೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಅಂತಾ ಅಧಿಕಾರಿಗಳ ವಿರುದ್ಧ ಸುಮಲತಾ ಅಂಬರೀಷ್​ ಕೂಗಾಡಿದ್ದಾರೆ.

ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಕೆ.ಆರ್.ನಗರದ ಚೌಕಹಳ್ಳಿಯಲ್ಲಿ ಗುದ್ದಲಿ ಪೂಜೆ ಏರ್ಪಡಿಸಲಾಗಿತ್ತು. ನಾಲೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲು ಸುಮಲತಾ ಬಂದಿದ್ದರು. ಕೇಂದ್ರ ಸರ್ಕಾರದ ಸಂಸದರ ನಿಧಿಯಿಂದ ಕೈಗೊಂಡಿರುವ ಕಾಮಗಾರಿ ಇದಾಗಿತ್ತು.

ಗುದ್ದಲಿ ಪೂಜೆ ಸ್ಥಳದಲ್ಲಿ ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದಿದ್ದಕ್ಕೆ ಕೋಪಗೊಂಡ ಸುಮಲತಾ ಅವರು ಕಾರ್ಯಪಾಲಕ ಅಭಿಯಂತರ ಜಿ.ಜೆ.ಈರಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಜೆ.ಗುರುರಾಜ್ ಹಾಗೂ ಇಂಜಿನಿಯರ್ ಅಭಿಲಾಷ್‌ ಮತ್ತು ಕುಶಾಲನಗರ ವೃತ ಸೂಪರಿಂಟೆಂಡೆಂಟ್ ಇಂಜಿನಿಯರ್‌ ಚೆನ್ನಕೇಶವಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ನಿಗದಿಯಾಗಿದ್ದ ಗುದ್ದಲಿ ಪೂಜೆ ನೆರವೇರಿಸದೆ ವಾಪಸ್‌ ಆದರು.

ನೀವು ಸಂಸದರಿಗೆ ಅಗೌರವ ತೋರಿಸುತ್ತಿದ್ದೀರಿ. ಶಿಸ್ತು ಬದ್ಧ ವ್ಯಸ್ತೆ ಮಾಡಿಲ್ಲ. ಪ್ರತಿ ಬಾರಿ ಹೀಗೆ ಮಾಡುತ್ತೀರಿ. ನಿಮ್ಮ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ದೂರು ನೀಡಿ ಶಿಸ್ತು ಕ್ರಮಕ್ಕೆ ಒತ್ತಾಯ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net