ದೇಶದಲ್ಲಿ ಅವಘಡ ಆಗುತ್ತೆ ಎಂದಿದ್ದೆ, ಅದೀಗ ಆರಂಭವಾಗಿದೆ... ಮುಂದೆ ದೊಡ್ಡ ಅಪಾಯವಿದೆ: ಕೋಡಿಶ್ರೀ ಭವಿಷ್ಯ

Kodi Shree
Published on

ಬಳ್ಳಾರಿ: ಇನ್ನು ಒಂದೂವರೆ ವರ್ಷದಲ್ಲಿ ಮಹಾಮಾರಿ ಕೋವಿಡ್​-19 ಸಂಪೂರ್ಣವಾಗಿ ಮರೆಯಾಗುತ್ತದೆ. ಆದರೆ, ಹೋಗುವಾಗ ವಿಶೇಷವಾದ ಕಷ್ಟ ಒಂದನ್ನು ಕೊಟ್ಟು ಹೋಗುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದರು.

ಬಳ್ಳಾರಿಯಲ್ಲಿ ಇಂದು ಮಾತನಾಡಿದ ಕೋಡಿಮಠದ ಶ್ರೀಗಳು, ಕೋವಿಡ್​ ಮತ್ತೆ ಬರುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಅದರಂತೆ ಕರೊನಾ ಪ್ರಕರಣಗಳು ನಿತ್ಯವು ಏರಿಕೆಯಾಗುತ್ತಿದೆ. ಆದರೆ, ಕೊವಿಡ್ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಕಣ್ಮರೆಯಾಗುತ್ತದೆ. ಆದರೆ, ಕರೊನಾ ಹೋಗುವಾಗ ಜಗತ್ತಿನಾದ್ಯಂತ ಕುಡಿಯುವುದಕ್ಕೆ ನೀರಿಲ್ಲದಂತೆ ಆಗುತ್ತದೆ. ಅಷ್ಟೊಂದು ನೋವನ್ನು ಕೊಡುತ್ತದೆ ಎಂದು ಭಯಾನಕ ಭವಿಷ್ಯ ನುಡಿದರು.

ಕೋವಿಡ್ ವಿಶೇಷ ಏನೆಂದರೆ, ಮನುಷ್ಯನಿಗೆ ಕಷ್ಟ ಅಂತಾ ಬಂದಾಗ ಮಾತ್ರ ದೇವರು, ಧರ್ಮ ಅಂತಾನೆ ಮತ್ತು ಪ್ರಾರ್ಥನೆ‌ ಮಾಡ್ತಾನೆ. ಆದರೆ, ಕೋವಿಡ್ ನೇರವಾಗಿ ಬಂದು ದೇವರನ್ನೆ ಹಿಡಿದುಕೊಂಡಿತು. ಹೀಗಾಗಿ ದೇವಸ್ಥಾನದ ಬಾಗಿಲಗಳು ಮುಚ್ಚಿದವು. ಆ ಮೇಲೆ ಜನರ ಮೇಲೆ ಬಂತು. ನಂತರ ನೀರಿನ ಮೇಲೆ ಬಂತು. ಬಳಿಕ ಭೂಮಿಯ ಮೇಲೆ ಬಂತು. ಒಂದೂವರೆ ವರ್ಷದಲ್ಲಿ ಹೋಗುತ್ತದೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತದೆ. ಹೀಗಾಗಿ ಈಗಿನಿಂದಲೇ ಎಚ್ಚರ ವಹಿಸಿದರೆ ಅದರಿಂದ ತಪ್ಪಿಕೊಳ್ಳಬಹುದು. ಈಗ ಕೋವಿಡ್ ಗಾಳಿಯ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು ಎಂದರು.

ಮಳೆ ಬಗ್ಗೆ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು, ಈ ಹಿಂದೆ ಕಂಡಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗತ್ತೆ, ಬಯಲು ಮಲೆನಾಡಾಗತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರು ಕಂಡಮಂಡಲ ಆಗ್ತಾ ಇದೆ. ಮುಂಗಾರು ಮಳೆ ಇನ್ನೂ ಜಾಸ್ತಿಯಾಗೋ ಲಕ್ಷಣ ಕಾಣ್ತಾ ಇದೆ. ಈ ಬಾರಿ ಅಕಾಲಿಕ ಮಳೆ ಆಗುವ ಲಕ್ಷಣವೂ ಇದೆ. ದೊಡ್ಡ ದೊಡ್ಡ ನಗರಗಳಿಗೆ ತೊಂದರೆಯಾಗುತ್ತದೆ ಎಂದರು.

ರಾಜಕೀಯದ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಶ್ರೀಗಳು, ರಾಜಕೀಯ ಅಸ್ಥಿರ ಅಂತಾ ಮೊದಲೇ ಹೇಳಿದ್ದೆ. ಗುಂಪುಗಳಾಗ್ತಾವೆ ಅಂದಿದ್ದೆ. ಅದನ್ನು ಈಗ ಕಂಡುಕೊಂಡಿದ್ದೀರಾ. ನಾನು ಭಾರತ ದೇಶದಲ್ಲಿ ಅವಘಡ ಆಗುತ್ತೆ ಎಂದಿದ್ದೆ. ಅದು ಈಗ ಪ್ರಾರಂಭವಾಗಿದೆ. ಪೈಗಂಬರರನ್ನು ಅವಹೇಳನ‌ ಮಾಡಿ, ಜಗತ್ತಿನಾದ್ಯಂತ ಶುರುವಾಗಿದೆ. ಮುಂದೆ ಇದರಿಂದ ಅಪಾಯ ಇದೆ ಎಂದು ಭವಿಷ್ಯ ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net