

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ಮಾಜಿ ಶಾಸಕ ಆರ್.ವಿ. ದೇವರಾಜ್ ಪುತ್ರ ಯುವರಾಜ ಬರ್ತಡೇ ಪಾರ್ಟಿಯಲ್ಲೂ ಡ್ರಗ್ಸ್ ಬಳಕೆ ಆಗಿರುವುದು ಚಾರ್ಜ್ಶೀಟ್ನಲ್ಲಿ ಬಯಲಾಗಿದೆ.
ಬಿಬಿಎಂಪಿ ವಾರ್ಡ್ ನಂ 118ರ ಸದಸ್ಯರಾಗಿದ್ದ ಆರ್.ವಿ ಯುವರಾಜ್, ತಮ್ಮ ಬರ್ತಡೆ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡಿದ್ದಾರೆ ಎಂಬುದು ಸಿಸಿಬಿ ತನಿಖೆಯಿಂದ ಬಯಲಾಗಿದೆ. ದಾಖಲೆ ಸಮೇತ ಸಾಬೀತು ಪಡಿಸಿ, ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
2020 ಜುಲೈ 5ರ ರಾತ್ರಿ ಯುವರಾಜ್ ಬರ್ತಡೆ ಪಾರ್ಟಿ ಮಾಡಿಕೊಂಡಿದ್ದ. ಯಲಹಂಕ ಬಳಿಯ ಲೇ-ರೋಮಾ ಗಾರ್ಡೆನಿಯಾ ಹೋಮ್ ಸ್ಟೇ ಯಲ್ಲಿ ಬರ್ತಡೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಆ ಪಾರ್ಟಿ ವೇಳೆ ಆರೋಪಿಗಳಾದ ಆದಿತ್ಯ ಆಳ್ವ, ಕಿರಣ್ ಕಾರ್ತಿಕ್ ಅಲಿಯಾಸ್ ಕೆ.ಡಿ. ಮ್ಯಾಶಿ, ವೈಭವ್ ಕುಮಾರ್ ಜೈನ್ ಹಾಗೂ ಇತರರು ಭಾಗಿಯಾಗಿದ್ರು.
ಆರ್.ವಿ.ಯುವರಾಜ್ ಬರ್ತಡೆ ಪಾರ್ಟಿಯಲ್ಲಿ ಇಬ್ಬರಿಂದ ಡ್ರಗ್ಸ್ ಮಾರಾಟವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ವೈಭವ್ ಕುಮಾರ್ ಜೈನ್ ಹಾಗೂ ಕಿರಣ್ ಕಾರ್ತಿಕ್ನಿಂದ ಬರ್ತಡೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಡ್ರಗ್ಸ್ ಮಾರಾಟವಾಗಿದೆ ಎಂದು ಸಿಸಿಬಿ ತನಿಖೆ ವೇಳೆ ಆರ್.ವಿ.ಯುವರಾಜ್ ಹೇಳಿಕೆ ನೀಡಿದ್ದಾನೆ.
ಸ್ನೇಹಿತರ ಒತ್ತಾಯದ ಮೇರೆಗೆ ನನ್ನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಅಲ್ಲಿದ್ದ ಕೆಲ ಆರೋಪಿಗಳು ಡ್ರಗ್ಸ್ ಮಾರಾಟ ಮಾಡಿದ್ರು. ಅದನ್ನು ನಾನು ಪ್ರಶ್ನೆ ಮಾಡಿದ್ದೆ. ಅವರ ವಿರುದ್ಧ ನಾನೇ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳುತ್ತೇನೆಂದು ಯುವಕರಾಜ್ ತಪ್ಪೊಪ್ಪಿಕೊಂಡಿದ್ದಾನೆ. ಡ್ರಗ್ಸ್ ಮಾರಾಟದ ಬಗ್ಗೆ ಆರ್.ವಿ ಯುವರಾಜ್ ಸಾಕ್ಷಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸಿಸಿಬಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಆದಿತ್ಯ ಆಳ್ವಾಗೆ ಸೇರಿದ ಹೌಸ್ ಆಫ್ ಲೈಫ್ ರೆಸಾರ್ಟ್ ವ್ಯವಹಾರ ನೋಡಿಕೊಳ್ತಿದ್ದ ಕಿರಣ್ ಕಾರ್ತಿಕ್ ಹಾಗೂ ವೈಭವ್ ಕುಮಾರ್ ಜೈನ್, ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಡೀಲ್ ಮಾಡಿ ಪಾರ್ಟಿಗಳಿಗೆ ಬರುತ್ತಿದ್ದವರಿಗೆ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಡೀಲ್ ಸಂಬಂಧ ನೈಜೀರಿಯಾ ಪ್ರಜೆಗಳ ಜತೆ ಆರೋಪಿಗಳು ನಡೆಸಿರುವ ಚಾಟಿಂಗ್ ಕೂಡ ಸಿಸಿಬಿಗೆ ಲಭ್ಯವಾಗಿದೆ. ವಾಟ್ಸಪ್, ಮೆಸೆಂಜರ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳ ಮೂಲಕ ಆರೋಪಿಗಳು ಡ್ರಗ್ಸ್ ಡೀಲ್ ಮಾಡಿದ್ದಾರೆಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಪಾರ್ಟಿಗಳಿಗೆ ಯುವಕ-ಯುವತಿಯರನ್ನ ಕರೆತರುತ್ತಿದ್ದ ಆರೋಪಿ ಕಿರಣ್ ಕಾರ್ತಿಕ್, ಅವರಿಗೆ ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. ಹ್ಯಾಪಿ ನ್ಯೂ ಇಯರ್ ದಿನ, ವಿಕೇಂಡ್ನಲ್ಲಿ ಹಾಗೂ ಸ್ಪೇಷಲ್ ಡೇ ಗಳಲ್ಲಿ ಪಾರ್ಟಿಗಳನ್ನ ಆಯೋಜನೆ ಮಾಡ್ತಿದ್ದ. ಈ ಪಾರ್ಟಿಗಳಲ್ಲಿ ಸ್ಥಳೀಯ ಯುವಕ-ಯುವತಿಯರು ಹಾಗೂ ವಿದೇಶಿಗರು ಭಾಗಿಯಾಗ್ತಿದ್ರು. ಪಾರ್ಟಿಗಳಿಗೆ ಯುವತಿಯರಿಗೆ ಉಚಿತ ಪ್ರವೇಶ ನೀಡಲಾಗುತ್ತಿತ್ತು. ಪಾರ್ಟಿಯಲ್ಲಿ ಭಾಗಿಯಾಗ್ತಿದ್ದವರಿಗೆ ಒಂದು ಎಕ್ಸೈಟೆಸ್ಸಿ ಮಾತ್ರೆ 1 ಗ್ರಾಂಗೆ 1500 ರಿಂದ 2500 ರೂ ಗೆ ಮಾರಾಟ ಮಾಡಲಾಗುತ್ತಿತ್ತು ಎಂಬುದನ್ನು ಚಾರ್ಜ್ಶೀಟ್ನಲ್ಲಿ ಸಿಸಿಬಿ ಉಲ್ಲೇಖಿದೆ. (ದಿಗ್ವಿಜಯ ನ್ಯೂಸ್)