ಆರ್.ಆರ್. ನಗರದಲ್ಲಿ ನಾಳೆಯಿಂದ 2 ಹಂತದ ಕೋವಿಡ್ ಟೆಸ್ಟ್ : ಚುನಾವಣೆ ಸಿಬ್ಬಂದಿ, ವೃದ್ಧರು, ಲಕ್ಷಣವಿದ್ದವರಿಗೆ ಆದ್ಯತೆ

carona logo
Published on

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆ ವೇಳೆ ಕರೊನಾ ಸೋಂಕು ಹರಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದಲ್ಲಿ 2 ಹಂತದ ಕೋವಿಡ್ ಪರೀಕ್ಷೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಮತ್ತು ಮತದಾನದ ವೇಳೆ ಜನರು ಮಾಸ್ಕ್ ಇಲ್ಲದೆ ಸಂಚಾರ, ಸಾಮಾಜಿಕ ಅಂತರ ಪಾಲಿಸದೇ ಗುಂಪು ಸೇರಿದ್ದು, ಕರೊನಾ ಸೋಂಕು ಹೆಚ್ಚಾಗಿ ಹರಡಿರಬಹುದು. ಹೀಗಾಗಿ, ಕ್ಷೇತ್ರದಲ್ಲಿ ಅ.6 ರಿಂದ 9ರವರೆಗೆ ಮತ್ತು ಅ.11 ರಿಂದ 16ರ ವರೆಗೆ ರ‌್ಯಾಂಡಂ ಕರೊನಾ ಪರೀಕ್ಷೆ ಮಾಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಸೋಂಕು ಪರೀಕ್ಷೆ ವ್ಯವಸ್ಥಿತವಾಗಿ ನಡೆಸುವಂತೆ ಸರ್ಕಾರ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಬಿಬಿಎಂಪಿಗೆ ತಿಳಿಸಿದೆ.

ಯೋಜನೆ ರೂಪಿಸಲು ಆದೇಶ: ಸರ್ಕಾರದ ಸೂಚನೆ ಆಧರಿಸಿ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಪರೀಕ್ಷೆಗೆ ಬೇಕಾದ ಸಿಬ್ಬಂದಿ, ಕೋವಿಡ್ ಪರೀಕ್ಷಾ ಕಿಟ್‌ಗಳು, ವಾಹನ ವ್ಯವಸ್ಥೆ ಕುರಿತು ಕ್ರಿಯಾ ಯೋಜನೆ ರೂಪಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಆರೋಗ್ಯಾಧಿಕಾರಿಗಳ ಯೋಜನೆ ಆಧರಿಸಿ ಶುಕ್ರವಾರದಿಂದ ಕೋವಿಡ್ ಪರೀಕ್ಷಾ ಕಾರ್ಯ ಆರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ.

3 ವಿಭಾಗದವರ ಪರೀಕ್ಷೆ: ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡ 1 ಸಾವಿರ ಸಿಬ್ಬಂದಿ, ಕ್ಷೇತ್ರದಲ್ಲಿ ಸೋಂಕಿನ ಲಕ್ಷಣ ಮತ್ತು ಸೋಂಕಿತರೊಂದಿಗೆ ಸಂಪರ್ಕ ಇದ್ದವರು ಹಾಗೂ ವೃದ್ಧರು, ಇತರೆ ದೀರ್ಘಕಾಲಿಕ ರೋಗದಿಂದ ಬಳಲುವವರನ್ನು ಗುರುತಿಸಿ 3 ವಿಭಾಗದವರನ್ನೂ ಪರೀಕ್ಷೆ ಮಾಡಲಾಗುವುದು. ಕೋವಿಡ್ ಪರೀಕ್ಷೆ ವೇಳೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ನೆರವು ಪಡೆಯಲು ಯೋಜನೆ ರೂಪಿಸಲಾಗುತ್ತಿದೆ.

ಖಾಸಗಿ ಆಸ್ಪತ್ರೆ, ಮೆಡಿಕಲ್‌ಗಳಿಂದ ಮಾಹಿತಿ: ಜ್ವರ, ಕೆಮ್ಮು, ನೆಗಡಿ ಸೇರಿ ಇತರೆ ಸೋಂಕಿನ ಲಕ್ಷಣಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರು ಮತ್ತು ಔಷಧ ಮಳಿಗೆಗಳಲ್ಲಿ ಮಾತ್ರೆ, ಔಷಧ ತೆಗೆದುಕೊಳ್ಳುವವರ ಮಾಹಿತಿ ಪಡೆಯಲಾಗುವುದು. ಒಟ್ಟಾರೆ, ಸೋಂಕು ಹರಡಿರುವ ಎಲ್ಲ ಮೂಲಗಳನ್ನು ಪರೀಕ್ಷೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net