

ಬೆಂಗಳೂರು: ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ವಿಧಾನಸಭಾ ಕ್ಷೇತ್ರದ 678 ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ. ಇಲ್ಲಿ ಒಟ್ಟು 16 ಅಭ್ಯರ್ಥಿಗಳಿದ್ದಾರೆ. 4,62,236 ಮತದಾರರು ಇವರ ಭವಿಷ್ಯ ನಿರ್ಧರಿಸಲಿದ್ದಾರೆ. ಇಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಮುನಿರತ್ನ, ಕಾಂಗ್ರೆಸ್ ನಿಂದ ಕುಸುಮಾ ಚುನಾವಣಾ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಮತದಾನ ಹಲವೆಡೆ ಮಂದಗತಿಯಲ್ಲಿ ಸಾಗಿದ್ದು, ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಕುಟುಂಬ ಸಮೇತರಾಗಿ ಉಲ್ಲಾಳ ಮೈನ್ ರೋಡ್ ನಲ್ಲಿರುವ ಜ್ಞಾನ ಭಾರತಿ ವಾರ್ಡಿನ ಎಚ್.ಎಂ.ಆರ್ ಸ್ಕೂಲ್ ಮತಗಟ್ಟೆಯಲ್ಲಿ ಮತಚಲಾಯಿಸಿದರು. 4.6 ಲಕ್ಷ ಮತದಾರರ ಪೈಕಿ 2.41 ಲಕ್ಷ ಪುರುಷರು, 2.21 ಲಕ್ಷ ಮಹಿಳೆಯರಿದ್ದಾರೆ. 678 ಮತಗಟ್ಟೆಗಳ ಪೈಕಿ 11 ಅತಿ ಸೂಕ್ಷ್ಮ, 82 ಸೂಕ್ಷ್ಮ, 585 ಸಾಮಾನ್ಯ ಮತಗಟ್ಟೆಗಳು. ಎರಡು ಸಖಿ ಮತಗಟ್ಟೆಗಳು.
ಉಪಚುನಾವಣೆ ಕಾರಣ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 2,563 ಭದ್ರತಾ ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ಇದಕ್ಕಾಗಿ ನಿಯೋಜಿಸಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಭದ್ರತೆಯ ಹೊಣೆ ಹೊರಿಸಲಾಗಿದ್ದು, ಅವರ ನೆರವಿಗೆ ಇಬ್ಬರು ಡಿಸಿಪಿ, 8 ಎಸಿಪಿ, 30 ಇನ್ಸ್ಪೆಕ್ಟರ್, 94 ಪಿಎಸ್ಐ, 185 ಎಎಸ್ಐ ಗಳು ಸೇರಿ 2,563 ಸಿಬ್ಬಂದಿಯನ್ನು ಒದಗಿಸಲಾಗಿದೆ. (ದಿಗ್ವಿಜಯ ನ್ಯೂಸ್)