ಹನೂರು ಕ್ಷೇತ್ರ ಅಭಿವೃದ್ಧಿಗೆ ಆರ್.ನರೇಂದ್ರ ಪರಿಶ್ರಮ ಅಧಿಕ

29 HANUR 5
Published on

ಹನೂರು: ಮಾಜಿ ಶಾಸಕ ಆರ್.ನರೇಂದ್ರ ಅವರ ಪರಿಶ್ರಮ ಫಲವಾಗಿ ಕ್ಷೇತ್ರಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ 212 ಕೋಟಿ ರೂ. ಅನುದಾನವನ್ನು ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ನನ್ನ ಪರಿಶ್ರಮ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದರೆ ಸಾಬೀತುಪಡಿಸಲಿ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಸವಾಲು ಹಾಕಿದರು.

ಮಾಜಿ ಶಾಸಕ ಆರ್.ನರೇಂದ್ರ ಅವರ ಅಧಿಕಾರಾವಧಿಯಲ್ಲಿ ಸರ್ಕಾರದ ಅನುದಾನ 108 ಕೋಟಿ ರೂ. ವೆಚ್ಚದಲ್ಲಿ ಕೆಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ, 450 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 400ಕ್ಕೂ ಹೆಚ್ಚು ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದಾರೆ. ಈವರೆಗೂ ಪ್ರಚಾರವನ್ನು ಬಯಸಿಲ್ಲ. ಆದರೆ ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಸುಳ್ಳು ಮಾಹಿತಿಯನ್ನು ನೀಡುತ್ತಿದ್ದು, ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ನರೇಂದ್ರ ಅವರು 3ನೇ ಬಾರಿ ಶಾಸಕರಾಗಿದ್ದ ವೇಳೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಸಂಬಂಧ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅನುಮೋದನೆಯೂ ಆಗಿತ್ತು. ಆದರೆ ಈ ವೇಳೆ ಚುನಾವಣೆ ಆಗಮಿಸಿದ್ದರಿಂದ ಅನುದಾನ ಬಿಡುಗಡೆಯಾಗಿರಲಿಲ್ಲ. ಇದೀಗ ಈ ಬಗ್ಗೆ ನರೇಂದ್ರ ಅವರು ಸಚಿವರಲ್ಲಿ ಮನವಿ ಮಾಡಿದ್ದರು. ಸಚಿವರಾದ ಡಾ.ಎಚ್.ಸಿ ಮಹದೇವಪ್ಪ ಹಾಗೂ ಕೆ. ವೆಂಕಟೇಶ್ ಅವರು ಮುತುವರ್ಜಿ ವಹಿಸಿದ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದರಲ್ಲಿ ಮಾಜಿ ಶಾಸಕರ ಶ್ರಮ ಅಪಾರ. ಆದರೆ ಶಾಸಕ ಎಂ.ಆರ್.ಮಂಜುನಾಥ್ ಅವರು ಈ ಅನುದಾನವನ್ನು ನಾನೇ ತಂದಿರುವುದಾಗಿ ಹೇಳಿಕೊಳ್ಳುತ್ತಿರುವುದರ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಹಾಡಿಗಳಿಗೆ ವಿದ್ಯುತ್, ರಸ್ತೆ ಕಲ್ಪಿಸುವ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ 3 ಬಾರಿ ಸಭೆ ನಡೆದಿದೆ. ಆದರೆ ಹಾಲಿ ಶಾಸಕರು ಯಾವ ಸಭೆಗೂ ಭಾಗವಹಿಸಿಲ್ಲ. ಇತ್ತ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಪತ್ರ ವ್ಯವಹಾರವನ್ನೂ ಮಾಡಿಲ್ಲ. ಇದೀಗ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ನನ್ನ ಶ್ರಮ ಎಂದು ಹೇಳಿಕೊಳ್ಳುತ್ತಿದ್ದಾರೆ. ಅನುದಾನ ತರುವಲ್ಲಿ ದಾಖಲೆಗಳಿದ್ದರೆ ಸಾಬೀತುಪಡಿಸಲಿ ಎಂದು ಸವಾಲು ಎಸೆದರು.

ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯ್ಕ, ತಾಪಂ ಮಾಜಿ ಅಧ್ಯಕ್ಷ ವೆಂಕಟರಮಣನಾಯ್ಡು, ಬಗರ್ ಹುಕುಂ ಸಮಿತಿ ಸದಸ್ಯ ಮಣಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣಮ್ಮ, ಮುಖಂಡರಾದ ಮಹೇಶ್, ನಿಂಗಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net