

ಸೊರಬ: ಮಾನಿನಿಯರಿಗೆ ಚಿನ್ನಾಭರಣಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅಷ್ಟೇ ಅಲ್ಲ, ಮೈಮೇಲೆ ಹಾಕಿಕೊಂಡಿರುವ ಒಡವೆಗಳು ಮತ್ತೊಬ್ಬರ ಕಣ್ಣು ಕುಕ್ಕುವಂತೆ ಹೊಳೆಯುತ್ತಿಬೇಕು ಎಂಬ ಆಸೆ ಬೇರೆ. ಇಂಥ ಆಸೆಗೆ ಬಿದ್ದ ಮಹಿಳೆ 80 ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ತಾಲೂಕಿನ ಆನವಟ್ಟಿ ನೆಹರು ನಗರದ ನಂದಾ (54) ಎಂಬುವರು ಒಡವೆ ಕಳೆದುಕೊಂಡ ಮಹಿಳೆ.
ಆಗಿದ್ದೇನು?
ಬುಧವಾರ ಮಧ್ಯಾಹ್ನ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಿಮ್ಮ ಮನೆಯಲ್ಲಿ ಬೆಳ್ಳಿ, ಬಂಗಾರದ ಒಡವೆಗಳು ಇದ್ದರೆ ಕೊಡಿ ಪಾಲಿಶ್ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ವಂಚಕರನ್ನು ಮಾತನ್ನು ನಂಬಿದ ಮಹಿಳೆ ಮನೆಯಲ್ಲಿದ್ದ ಬೆಳ್ಳಿಯ ಒಡವೆಗಳನ್ನು ಕೊಟ್ಟಿದ್ದಾರೆ. ಈ ಬೆಳ್ಳಿ ಒಡವೆಗಳನ್ನು ಫಳ ಫಳ ಹೊಳೆಯುವಂತೆ ಪಾಲಿಶ್ ಮಾಡಿಕೊಟ್ಟಿದ್ದಾರೆ.
ಬೆಳ್ಳಿ ಒಡವೆಗಳು ಹೊಳೆಯುವಂತೆ ಆಗಿದ್ದನ್ನು ಕಂಡ ಅವರು, ತಮ್ಮ ಕೊರಳಲ್ಲಿದ್ದ 70 ಗ್ರಾಂ ತೂಕದ ಬಂಗಾರದ ಸರ ಮತ್ತು ಹತ್ತು ಗ್ರಾಂ ತೂಕದ ಉಂಗುರವನ್ನು ಪಾಲಿಶ್ ಮಾಡಲು ಕೊಟ್ಟಿದ್ದಾರೆ. ನಂದಾ ಅವರ ಸಮ್ಮುಖದಲ್ಲಿ ಒಂದು ಕುಕ್ಕರ್‌ನಲ್ಲಿ ಒಡವೆಗಳನ್ನು ಹಾಗೂ ಅರಿಶಿಣಪುಡಿ, ನೀರನ್ನು ಹಾಕಿದ ವಂಚಕರು, ಗ್ಯಾಸ್ ಸ್ಟವ್ ಮೇಲೆ ಇಟ್ಟು 30 ನಿಮಿಷ ಬಿಸಿ ಮಾಡಿ ನಂತರ ತೆಗೆಯಿರಿ ಎಂದು ಹೇಳಿದ್ದಾರೆ. ವಂಚಕರು ಹೇಳಿದಂತೆ 30 ನಿಮಿಷದ ನಂತರ ಕುಕ್ಕರ್ ತೆಗೆದು ನೋಡಿದರೆ ಚಿನ್ನ ಹೊಳೆಯುವುದಿರಲಿ ಮಂಗ ಮಾಯ ಆಗಿದ್ದವು. ಆಗ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದ್ದು, ಆನವಟ್ಟಿ ಠಾಣೆಗೆ ದೂರು ನೀಡಿದ್ದಾರೆ.
ಒಡವೆ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚನೆ ಮಾಡುವ ಪ್ರಕರಣಗಳು ಹೊಸದೇನಲ್ಲ. ಆದರೆ ಪದೇಪದೆ ಈ ಜಾಲಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ.