ಮಧ್ಯರಾತ್ರಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ​ ಮನೆಗೆ ನುಗ್ಗಿ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..!

Satish Reddi
Published on

ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಶಾಸಕರ ಮನೆ ಮುಂದೆ ನಿಂತಿದ್ದ ಪಾರ್ಚೂನರ್ ಕಾರು ಸೇರಿದಂತೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ.

ಸತೀಶ್​ ರೆಡ್ಡಿ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಮನೆಯ ಆವರಣದಲ್ಲಿ ಬುಧವಾರ-ಗುರುವಾರ ಮಧ್ಯರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ. ನಾಲ್ಕು ಜನ ದುಷ್ಕರ್ಮಿಗಳು ಪೆಟ್ರೋಲ್​ ಕ್ಯಾನ್ ಗಳನ್ನು ತಂದು ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಶ್ರೀನಾಥ್, ಪೊಲೀಸ್ ಜಾಯಿಂಟ್ ಕಮೀಷನರ್ ಮುರುಗನ್ ಪರಿಶೀಲನೆ ನಡೆಸಿದ್ದಾರೆ.

ದುಷ್ಕರ್ಮಿಗಳು ಶಾಸಕರ ಮನೆಯ ಹಿಂಬದಿಯ ಗೇಟಿಂದ ಒಳಗೆ ನುಗ್ಗಿದ್ದಾರೆಂದು ಆಗ್ನೇಯ ವಿಭಾಗ ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್ ಸ್ಪಷ್ಟನೆ ನೀಡಿದ್ದಾರೆ. ವಿಶೇಷ ತಂಡಗಳ ಮೂಲಕ‌ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.

ಕೇವಲ 3 ಮೂರು ನಿಮಿಷಗಳಲ್ಲಿ ಕೃತ್ಯ..

ತಡರಾತ್ರಿ 1.25ಕ್ಕೆ ಎಂಟ್ರಿ ಕೊಟ್ಟಿರುವ ದುಷ್ಕರ್ಮಿಗಳು, ಬಳಿಕ 1.28ಕ್ಕೆ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ. ಹಿಂಬದಿ ಗೇಟ್ ಬಳಿಯಿಂದ ಎಂಟ್ರಿ ಕೊಟ್ಟು ಅಲ್ಲಿಂದಲೇ ಪರಾರಿಯಾಗಿದ್ದಾರೆ. ಓರ್ವ ಓಡಾಡೋದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಸಿಸಿಟಿವಿ ಮರೆಮಾಚಿ, ಗೇಟ್ ಬಳಿಯ ಗಿಡಕ್ಕೆ ಒರಗಿ ದುಷ್ಕರ್ಮಿಗಳು ಎಂಟ್ರಿ ಕೊಟ್ಟಿದ್ದಾರೆ. ಮೂರೇ ನಿಮಿಷದಲ್ಲಿ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಬೊಮ್ಮನಹಳ್ಳಿ ಪೊಲೀಸರಿಂದ ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net