ಪ್ರೀತಿಸಿ ಮದ್ವೆ ಆದವಳು ಪಕ್ಕದ ಮನೆಯವನ ಜತೆ ಎಸ್ಕೇಪ್! ಮನನೊಂದು ಗಂಡ ಆತ್ಮಹತ್ಯೆಗೆ ಶರಣು

Vij Girl
Published on

ವಿಜಯಪುರ: ಪ್ರೀತಿಸಿ ಮದುವೆ ಆದವಳು ಪಕ್ಕದ ಮನೆಯವನ ಜತೆ ಎಸ್ಕೇಪ್​ ಆಗಿದ್ದಾಳೆ ಎನ್ನಲಾದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪತ್ನಿಯ ವರ್ತನೆಯಿಂದ ಮನನೊಂದ ಗಂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ವೆಂಕಟೇಶ ದೋರನಹಳ್ಳಿ (25) ಆತ್ಮಹತ್ಯೆ ಮಾಡಿಕೊಂಡಾತ. ಸಾವಿಗೂ ಮುನ್ನ ವೆಂಕಟೇಶ್​ ಫೇಸ್​ಬುಕ್​ನಲ್ಲಿ ವಿಡಿಯೋ ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನೇಣಿಗೆ ಶರಣಾಗಿದ್ದಾನೆ.

ಎರಡು ವರ್ಷಗಳ ಹಿಂದೆ ವೆಂಕಟೇಶ್​ ಮತ್ತು ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ವೆಂಕಟೇಶ್​ ಪಕ್ಕದ ಮನೆಯ ಸೋದರ ಸಂಬಂಧಿ ಶ್ರೀಶೈಲ್ ದೋರನಹಳ್ಳಿ ಎಂಬುವನ ಜೊತೆಗೆ ಯುವತಿ ಎಸ್ಕೇಪ್ ಆಗಿದ್ದಾಳೆಂದು ಆರೋಪಿಸಲಾಗಿದೆ. ಈ ಸಂಬಂಧ ವೆಂಕಟೇಶ್​ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಆದರೆ, ಅವಮಾನ ಸಹಿಸದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದೂರು ನೀಡಿದರೂ ವೆಂಕಟೇಶ್​ ಜತೆ ಇರೊಲ್ಲ, ಪ್ರಿಯಕರ ಶ್ರೀಶೈಲ್ ಜತೆ ಇರುವುದಾಗಿ ಯುವತಿ ಹೇಳಿದ್ದಳಂತೆ. ಬಳಿಕ ಆಕೆಯ ಹಕ್ಕುಗಳ ಬಗ್ಗೆ ಗಂಡ ವೆಂಕಟೇಶಗೆ ಪೊಲೀಸರು ಮನವರಿಕೆ ಮಾಡಿದ್ದರು. ಬಳಿಕ ಮನನೊಂದು ವೆಂಕಟೇಶ್​ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ.

ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಶ್ರೀಶೈಲ್ ಹೊಣೆ ಎಂದು ಹೇಳಿ ಫೇಸ್​ಬುಕ್​ ಲೈವ್ ಮಾಡಿ ವೆಂಕಟೇಶ್​ ನೇಣಿಗೆ ಶರಣಾಗಿದ್ದಾನೆ. ಫೇಸ್​ಬುಕ್​ ವಿಡಿಯೋ ಕಂಡು ಜಮೀನಿನಲ್ಲಿ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ ವೆಂಕಟೇಶ ಪ್ರಾಣ ಉಳಿಸಲು ಸ್ಥಳೀಯರ ಯತ್ನಿಸಿದರು. ಆದರೆ, ತಾಳಿಕೋಟೆ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆಯೇ ವೆಂಕಟೇಶ್​ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net