ಕೋರ್ಟ್​ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್​ರನ್ನು​ ಬಂಧಿಸಿದ ಹಲಸೂರು ಠಾಣಾ ಪೊಲೀಸರು

Jagadeesh
Published on

ಬೆಂಗಳೂರು: ಕೋರ್ಟ್​ ಆವರಣದಲ್ಲಿ ನಡೆದ ವಕೀಲರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಜಗದೀಶ್​ ಅವರನ್ನು ಹಲಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ವಕೀಲ ಜಗದೀಶ್ ಅವರು ಕೋರ್ಟ್​ ಆವರಣದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಹೊರಗಡೆಯಿಂದ ಜನರನ್ನು ಕರೆತಂದು ಗೂಂಡಾವರ್ತನೆ ಮಾಡಿದ್ದಾರೆಂದು​ ಆರೋಪಿಸಿ ಶನಿವಾರ ವಕೀಲರ ಸಂಘದ ವಿವೇಕ್​ ರೆಡ್ಡಿ ಅವರು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್​ ಅವರನ್ನು ಬಂಧಿಸಲಾಗಿದೆ.

ಭಾನುವಾರ ಸಂಜೆ ಒಳಗೆ ಜಗದೀಶ್​ ಅವರನ್ನು ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಭ್ರಷ್ಟಾಚಾರ ಪ್ರಕರಣ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಶುಕ್ರವಾರ ಸಿಟಿ ಸಿವಿಲ್​ ಕೋರ್ಟ್​ಗೆ ಹೋದಂತ ಸಮಯದಲ್ಲಿ ನನ್ನ ಹಾಗೂ ನನ್ನ ಮಗನ ಮೇಲೆ ಕೆಲ ಗೂಂಡಾಗಳು ಹಲ್ಲೆ ಮಾಡಿದ್ದಾರೆಂದು ಜಗದೀಶ್​ ಅವರು ಫೇಸ್​ಬುಕ್​ ಲೈವ್​ನಲ್ಲಿ ಆರೋಪ ಮಾಡಿದ್ದರು.

ಮಗನನ್ನು ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಲಾಗಿದೆ. ಏನಾದರೂ ಆದರೆ, ನಾನು ಯಾರನ್ನು ಬಿಡುವುದಿಲ್ಲ ಎಂದು ಜಗದೀಶ್​ ಅವರು ಕೂಗಾಡಿದ್ದರು. ಅಲ್ಲದೆ, ಪೊಲೀಸ್​ ಆಯುಕ್ತ ಕಮಲ್​ ಪಂತ್​ ಮತ್ತು ಐಜಿಪಿ ಪ್ರವೀಣ್​ ಸೂದ್​ ವಿರುದ್ಧವೂ ಕೂಗಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net