ಆಂಜನೇಯನ ಜನ್ಮ ಸ್ಥಳದಲ್ಲಿ ‌ಹಿಂದುಗಳಿಗೆ ಟಿಕೆಟ್ ನೀಡದಿದ್ರೆ ಸೋಲು ಫಿಕ್ಸ್​: ಕಾಂಗ್ರೆಸ್​ನಲ್ಲೇ ಗೊಂದಲ ಶುರು

Anjanadri
Published on

ಕೊಪ್ಪಳ: ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಮುಸ್ಲಿಮರಿಗೆ ಟಿಕೇಟ್ ನೀಡಬೇಡಿ ಎಂದು ಇಲ್ಲಿನ ಕಾಂಗ್ರೆಸ್​ ಮುಖಂಡರು ವರಿಷ್ಠರ ಮುಂದೆ ಮನವಿ ಮಾಡಿದ್ದು, ಕಾಂಗ್ರೆಸ್ ಟಿಕೆಟ್​ ನಿರೀಕ್ಷೆಯಲ್ಲಿರೋ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಬಿಗ್​ ಶಾಕ್ ಆಗಿದೆ.

ಆಂಜನೇಯನ ಜನ್ಮ ಸ್ಥಳದಲ್ಲಿ ‌ಹಿಂದುಗಳಿಗೆ ಟಿಕೆಟ್ ನೀಡದಿದ್ದರೆ ಸೋಲು ಖಚಿತ ಎಂಬುದು ಕಾಂಗ್ರೆಸ್​ ಮುಖಂಡರ ವಾದವಾಗಿದೆ. ಈ ವಿಚಾರವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮುಂದೆ ಪ್ರಸ್ತಾಪ ಮಾಡಿದ್ದು, ಇಕ್ಬಾಲ್ ಅನ್ಸಾರಿಗೆ ಇದು ಶಾಪವಾಗಿ ಪರಿಣಮಿಸಲಿದೆ.

ಕಳೆದ ಕೆಲ‌ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಕೊಪ್ಪಳ ಕಾಂಗ್ರೆಸ್​‌ನಲ್ಲಿ ಮನೆಯೊಂದು ಮೂರು ಬಾಗಿಲು ಸ್ಥಿತಿ ನಿರ್ಮಾಣವಾಗಿದೆ. ಅಂಜನಾದ್ರಿಯನ್ನು ಅಯೋಧ್ಯೆಯಂತೆ ನಿರ್ಮಾಣ ಮಾಡಲಾಗ್ತಿದೆ. ಇಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ‌ಪರಿಸ್ಥಿತಿ ಇಲ್ಲ ಎಂದು ಬಿ.ಕೆ.ಹರಿಪ್ರಸಾದ್​ಗೆ ಕಾಂಗ್ರೆಸ್​ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ವೇಳೆ ಹರಿಪ್ರಸಾದ್ ಕಾಂಗ್ರೆಸ್​ನಲ್ಲೇ ಹಿಂದೂ-ಮುಸ್ಲಿಂ ‌ಎಂಬುದನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಆದರೆ, ಮತ್ತೆ ಹರಿಪ್ರಸಾದ್ ಮುಂದೆ ಮುಖಂಡರು ನೋವು ತೋಡಿಕೊಂಡಿದ್ದಾರೆ. ನಮ್ಮನ್ನು ಸಿದ್ದರಾಮಯ್ಯ ಕೂಡ ಟಾರ್ಗೆಟ್ ಮಾಡಿದ್ರು. ಅಲ್ಲದೆ, ಇಕ್ಬಾಲ್ ‌ಅನ್ಸಾರಿ ಅವರು ಎಚ್.ಜಿ.ರಾಮುಲುರನ್ನು ಕಡೆಗಣಿಸಿದ್ರು ಕಾಂಗ್ರೆಸ್ ಮುಖಂಡ ವೀರಭದ್ರಪ್ಪ ನಾಯಕ, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಅವರು ದೂರು ನೀಡಿದ್ದಾರೆ.

ಎಚ್.ಆರ್.ಶ್ರೀನಾಥ್ ‌ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕೆಲ‌ ಮುಸ್ಲಿಂ ಮುಖಂಡರು ಕೂಡ ಎಚ್.ಆರ್.ಶ್ರೀನಾಥ ಪರ ಬ್ಯಾಟ್​ ಬೀಸಿದ್ದಾರೆ. ಆಂತರಿಕ ಸಭೆಯಲ್ಲಿ ನಡೆದ‌ ಚರ್ಚೆಯ ವಿಡಿಯೋ ಇದೀಗ ‌ವೈರಲ್ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net