ಕಷ್ಟದ ಸಮಯದಲ್ಲಿ ಬಹುಬೇಗನೇ ಸ್ಪಂದಿಸಿ ನೆರವು ನೀಡಿದ ಕಿಚ್ಚ ಸುದೀಪ್​ ಬಗ್ಗೆ ವಿದ್ಯಾರ್ಥಿ ಹೇಳಿದ್ದು ಹೀಗೆ..

BSC Student
Published on

ಹಾಸನ: ಮಳೆಯಿಂದ ಬೆಳೆ ಕೈಕೊಟ್ಟರು ಅಭಿಮಾನ ಕೈಬಿಡಲಿಲ್ಲ ಎಂಬ ಮಾತು ಹಾಸನದಲ್ಲಿ ಬಿಎಸ್ಸಿ ನರ್ಸಿಂಗ್​ ಓದುತ್ತಿರುವ ಜಿ.ಆರ್​. ಗಿರೀಶ್​ ಕುಮಾರ್ ಜೀವನದಲ್ಲಿ ನಿಜವಾಗಿದೆ. ಸೂಕ್ತ ಕಾಲದಲ್ಲಿ ನೋವಿಗೆ ಬೇಗನೆ ಸ್ಪಂದಿಸಿ, ಸಹಾಯ ಮಾಡಿದ ಅಭಿಮಾನಿಗಳಗಳ ಅಭಿಮಾನಿ ನಟ ಕಿಚ್ಚ ಸುದೀಪ್​ ಅವರಿಗೆ ಗಿರೀಶ್​ ಧನ್ಯವಾದಗಳನ್ನು ತಿಳಿಸಿದ್ದಾರೆ.

ಗಿರೀಶ್ ಅವರು ಹಾಸನದ ಖಾಸಗಿ ಕಾಲೇಜು ಒಂದರಲ್ಲಿ ಅಂತಿಮ ವರ್ಷದ BSc ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾರೆ. ಮೂಲತಹ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದವರು. ಗಿರೀಶ್​ ಅವರ ವಿದ್ಯಾಭ್ಯಾಸಕ್ಕೆ ಅವರ ಬಳಿಯಿದ್ದ ಜಮೀನು ಆಧಾರವಾಗಿತ್ತು. ರಾಗಿ ಬೆಳೆದಿದ್ದ ಅವರ ಕುಟುಂಬ ಇನ್ನೇನು ಫಸಲು ಕೈಗೆ ಬಂತು ಅನ್ನುವಷ್ಟರಲ್ಲಿ ಈ ಬಾರಿ ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದ ಬೆಳೆ ಕೈ ಕೊಟ್ಟು ಗಿರೀಶ್​ಗೆ ಕಾಲೇಜು ಶುಲ್ಕ ಕಟ್ಟಲಾಗಿರಲಿಲ್ಲ. ಇದರಿಂದ ಹಾಲ್ ಟಿಕೆಟ್ ಪಡೆಯಲಾಗದೆ ಪರೀಕ್ಷೆಗೆ ವಂಚಿತ ಆಗೋ ಪರಿಸ್ಥಿತಿ ಎದುರಾಗಿತ್ತು.

ಮೊದಲೇ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರಿಂದ ಈ ಸಂದರ್ಭದಲ್ಲಿ ಹಣ ಅವಶ್ಯಕತೆ ಗಿರೀಶ್​ ತುಂಬಾ ಇತ್ತು. ಅವರ ಕುಟುಂಬ ಅನೇಕರ ಬಳಿ ಸಾಲ ಕೇಳಿದರೂ ಯಾರು ಸ್ಪಂದಿಸಲಿಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಏನು ಮಾಡುವುದು ಅಂತಾ ಚಿಂತಿಸುತ್ತಿರುವಾಗ ಗಿರೀಶ್​ಗೆ ಹೊಳೆದಿದ್ದು, ಕಿಚ್ಚ ಸುದೀಪ್​ ಚಾರಿಟಬಲ್​ ಟ್ರಸ್ಟ್​. ಹಾಸನ ಕಿಚ್ಚ ಸುದೀಪ್​ ಅಭಿಮಾನಿ ಸಂಘದ ಸದಸ್ಯರನ್ನು ಭೇಟಿ ಮಾಡಿ ತಮ್ಮ ಅಸಹಾಯಕತೆಯನ್ನು ಗಿರೀಶ್​ ಹೇಳಿಕೊಂಡಿದ್ದರು. ಕೊನೆಗೆ ಈ ವಿಚಾರ ಸುದೀಪ್​ ಅವರಿಗೆ ತಲುಪಿ, ಕೂಡಲೇ ಸ್ಪಂದಿಸಿರುವ ಕಿಚ್ಚ ತಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಷ್ಟದಲ್ಲಿದ್ದ ಗಿರೀಶ್​ಗೆ 21,500 ರೂ. ಶುಲ್ಕ ಕಟ್ಟಿ ಪರೀಕ್ಷೆ ಬರೆಯುವಂತೆ ಸಹಾಯ ಮಾಡಿದ್ದಾರೆ.

ಸುದೀಪ್​ ಅವರ ನೆರವಿನಿಂದ ಭಾವುಕರಾದ ಗಿರೀಶ್ ಇದು ನನ್ನ ಜೀವನದಲ್ಲೇ ಟರ್ನಿಂಗ್ ಪಾಯಿಂಟ್. ಸುದೀಪ್​ ಸರ್ ನನಗೆ ಸಹಾಯ ಮಾಡಿದೇ ಹೋಗಿದ್ರೆ ಮೂರು ವರ್ಷ ಓದಿದ್ದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಾಂತಾಗುತ್ತಿತ್ತು. ಹೀಗಾಗಿ ಸುದೀಪ್ ಸರ್​ಗೆ ನಾನು ಚಿರಋಣಿ ಅಂತ ಗಿರೀಶ್​ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ನಾನು ಕೂಡ ಸುದೀಪ್​ ಅಣ್ಣನ ಅಭಿಮಾನಿಯಾಗಿದ್ದು, ನನ್ನಂತೆಯೇ ಅನೇಕರ ಬಾಳಿಗೆ ಅವರು ದೀಪವಾಗಿದ್ದಾರೆ. ಇವರ ಈ ಸೇವೆ ಹೀಗೆ ಮುಂದುವರಿಯಲಿ ಎಂದಿದ್ದಾರೆ.


ಇನ್ನು ವಿದ್ಯಾರ್ಥಿ ಗಿರೀಶ್​ಗೆ ಸುದೀಪ್ ನರವು ಸಿಗಲು ಮೂಲ ನೆರವಿನ ಕೊಂಡಿಯಾಗಿದ್ದು ಹಾಸನ ಕಿಚ್ಚಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷ ಸುದೀಪ್ ಎಂಬುವರಿಂದ. ವಿದ್ಯಾರ್ಥಿ ಗಿರೀಶ್ ಬಗ್ಗೆ ಕಿಚ್ಚ ಸುದೀಪ್​ಗೆ ಮಾಹೀತಿ ನೀಡಿದ್ದು ಹಾಸನದ ಅಭಿಮಾನಿ ಸುದೀಪ್. ಈ ಸಂಗತಿ ತಿಳಿದ ಸುದೀಪ್ ವಿದ್ಯಾರ್ಥಿ ಗಿರೀಶ್​ಗೆ ಶುಲ್ಕ ಕಟ್ಟಲು ತನ್ನ ಕಿಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಚೆಕ್ ನೀಡಿಸಿ ವಿದ್ಯಾರ್ಥಿಗೆ ಸ್ಪಂದಿಸಿದ್ದಾರೆ. ಇದರಿಂದ ಹಾಸನದ ಕಿಚ್ಚಸುದೀಪ್ ಅಭಿಮಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಕಿಚ್ಚ ಸುದೀಪ್ ಮಾಡಿದ ಒಂದು ನೆರವಿನಿಂದ ಅಂತಿಮವರ್ಷದ ಬಿಎಸ್ಸಿ ನರ್ಸಿಂಗ್​ ವ್ಯಾಸಂಗ ಮಾಡುತ್ತಿರುವ ಗಿರೀಶ್​ಗೆ ಬಹು ದೊಡ್ಡ ಉಪಕಾರ ಆಗಿದೆ. ಏನೇ ಆಗಲಿ ರೀಲ್ ಮೇಲೆ ಹೀರೋ ಆಗಿ ಅಭಿನಯಿಸೋ ಕಿಚ್ಚ ಸುದೀಪ್ ಕಾಣದಂತೆ ಸಹಾಯ ಮಾಡಿ ರಿಯಲ್ ಲೈಫ್​ನಲ್ಲೂ ಹೀರೋ ಆಗಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net