ಎಸ್ಪಿಗೆ ಪತ್ರ ಬರೆದಿದ್ದಕ್ಕೆ ಕಾನ್ಸ್​ಟೇಬಲ್​ ಗರಂ: PSI ಕರ್ಮಕಾಂಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪೇದೆ

PSI
ಕಾನ್ಸ್​ಟೇಬಲ್​ ಪರುಶುರಾಮ್​ ಮತ್ತು ಪಿಎಸ್​ಐ ಅಯ್ಯಪ್ಪ
Published on

ಕಲಬುರಗಿ: ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಸೂಚಿಸಿದ್ದಕ್ಕೆ ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ಗರಂ ಆಗಿರುವ ಪೊಲೀಸ್​ ಕಾನ್ಸ್​ಟೇಬಲ್, ಪಿಎಸ್​ಐ ಲಂಚಾವತಾರದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ​​

ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯಪ್ಪ ಮತ್ತು ಕಾನ್ಸ್​ಟೇಬಲ್​ ಪರುಶುರಾಮ್​ ನಡುವಿನ ಫೋನ್​ ಸಂಭಾಷಣೆ ಆಡಿಯೋ ವೈರಲ್​ ಆಗಿದೆ. ಕಾನ್ಸ್​ಟೇಬಲ್​ ಪರುಶುರಾಮ್​ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಿಎಸ್​ಐ ಅಯ್ಯಪ್ಪ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ವಿಚಾರ ಕಾನ್ಸ್​ಟೇಬಲ್​ಗೆ ತಿಳಿದ ಕೂಡಲೇ ಪಿಎಸ್​ಐಗೆ ಕರೆ ಮಾಡಿ ಠಾಣೆಯಲ್ಲಿ ನಡೆಯುವ ಕರ್ಮಕಾಂಡವನ್ನೆಲ್ಲ ಎಳೆ ಎಳೆಯಾಗಿ ಬಯಲು ಮಾಡಿದ್ದಾರೆ.

ನೀವು ಮೇಲಾಧಿಕಾರಿಗಳಿಗೆ ನನ್ನ ಬಗ್ಗೆ ರಿಪೋರ್ಟ್​ ಕೊಟ್ಟಿದ್ದೀರಾ ಎಂದು ಕಾನ್ಸ್​ಟೇಬಲ್​ ಪರುಶುರಾಮ್​, ಪಿಎಸ್​ಐ ಅಯ್ಯಪ್ಪರನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ಅಯ್ಯಪ್ಪ ನೀವು ಎಸ್ಪಿ ಅವರನ್ನು ಕೇಳಬೇಕು ಎಂದು ಹೇಳುತ್ತಾರೆ. ಇದರಿಂದ ಗರಂ ಆಗುವ ಪರುಶುರಾಮ್​, ನೀವು ಪೊಲೀಸ್​ ಠಾಣೆಯ ಒಳಗೆ ಮಟ್ಕಾ, ಇಸ್ಪೀಟ್​, ಬಾರ್​ ಸೇರಿದಂತೆ ಎಲ್ಲರಿಂದ ಪ್ರತಿ ತಿಂಗಳು ಮಾಮೂಲಿ ತೆಗೆದುಕೊಳ್ಳುತ್ತೀರಿ ಎಲ್ಲವನ್ನು ಬಿಚ್ಚಿಡಬೇಕಾ ಎಂದಿದ್ದಾರೆ.

ಇಷ್ಟೇ ಅಲ್ಲದೆ, ಮುಂದುವರಿದು ಮಾತನಾಡಿರುವ ಪರುಶುರಾಮ್​, ಬಾರ್​ನಿಂದ ಪುಕ್ಸಟ್ಟೆಯಾಗಿ ಬರುವ ಎಣ್ಣೆಯನ್ನು ಠಾಣೆಯ ಒಳಗಡೆ ಸಮವಸ್ತ್ರದಲ್ಲೇ ಕುಡಿಯುತ್ತೀರಿ. ಪೊಲೀಸ್​ ಜೀಪ್​ ಒಳಗಡೆಯೂ ಮದ್ಯಪಾನ ಮಾಡುತ್ತೀರಿ. ನೀವು ಎಣ್ಣೆ ಹೊಡೆಯುವುದು ಮತ್ತು ಬಾರ್​ನಿಂದ ಎಣ್ಣೆ ಪೂರೈಕೆಯಾಗುವ ವಿಡಿಯೋಗಳು ಇವೆ. ನೀವು ಏನೆಲ್ಲ ಅವ್ಯವಹಾರ ಮಾಡುತ್ತೀರಾ, ಅದಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋ ರೆಕಾರ್ಡಿಂಗ್​ ಇವೆ ಎಂದು ಎಳೆ ಎಳೆಯಾಗಿ ಠಾಣೆಯ ಕರ್ಮಕಾಂಡವನ್ನು ತೆರೆದಿಟ್ಟಿದ್ದಾರೆ.

ಪರುಶುರಾಮ್​ ಸಾಲು ಸಾಲು ಆರೋಪ ಮಾಡಿದರೂ ಪಿಎಸ್​ಐ ಅಯ್ಯಪ್ಪ ಹೆಚ್ಚು ಮಾತನಾಡದೇ ಇದನೆಲ್ಲ ಫೋನ್​ನಲ್ಲಿ ಮಾತನಾಡಬಾರದು, ಅಧಿಕಾರಿಯ ಜತೆ ಹೇಗೆ ಮಾತನಾಡಬೇಕೆಂಬುದನ್ನು ಕಲಿತುಕೋ ಎಂದಿದ್ದಾರೆ. ಎಷ್ಟೇ ಹೇಳಿದರೂ ಪಿಎಸ್​ಐ ಮಾತಿಗೆ ಬಗ್ಗದ ಪರುಶುರಾಮ್​ ಠಾಣೆಯ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದು, ಅದರ ಆಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net