

ಬೆಂಗಳೂರು: ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆಂದು ಹೇಳಿಕೆ ನೀಡಿದ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ಅವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಪಕ್ಷದ ಹಿರಿಯ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈಶ್ವರಪ್ಪ ಹೇಳಿಕೆ ವಿಷಯದಲ್ಲಿ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಲಾಗಿದೆ. ಪಕ್ಷದಲ್ಲಿ ಹಿರಿಯ ನಾಯಕರೆಲ್ಲ ಕುಳಿತು ಚರ್ಚೆ ಮಾಡಿದ್ದೇವೆ ಎಂದರು.
ಚರ್ಚೆಗೆ ಅವಕಾಶ ಕೊಡದೇ ಹೋದರೆ ಅಹೋರಾತ್ರಿ ಧರಣಿ ನಡೆಸುವುದೋ ಅಥವಾ ಇನ್ಯಾವ ಹೋರಾಟ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದ ಅವರು ಕೆಂಪುಕೋಟೆಯಿಂದ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆಂಬುದು ದೇಶ ದ್ರೋಹದ ಕೆಲಸ. ಅಂತವರು ಸರ್ಕಾರದಲ್ಲಿರಲು ಯೋಗ್ಯತೆ ಕಳೆದುಕೊಂಡಿದ್ದಾರೆ. ಅವರನ್ನು ತಕ್ಷಣದಿಂದಲೇ ಸಂಪುಟದಿಂದ ಕೈಬಿಡಬೇಕು ಎಂದರು.