ನಾಳೆ ಸೈಕ್ಲೋನ್ ಸೃಷ್ಟಿ? 19 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

cyclone
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ (ಮೇ 8) ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದರ ಪರಿಣಾಮ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ.

ಸೈಕ್ಲೋನ್‌ನಿಂದ ದಕ್ಷಿಣ ಆಂಧ್ರಪ್ರದೇಶ ಹಾಗೂ ಓರಿಸ್ಸಾದಲ್ಲಿ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಗಾಳಿ ವೇಗ ಹೆಚ್ಚಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಮಂಡ್ಯ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆಯಲ್ಲಿ ಮೇ 8 ರಂದು ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

ಉತ್ತರ ಒಳನಾಡಿನಲ್ಲೂ ಧಾರಾಕಾರವಾಗಿ ಮಳೆ ಬೀಳಲಿದೆ. ಶನಿವಾರ ತುಮಕೂರಿನ ಮಧುಗಿರಿಯಲ್ಲಿ 50 ಮಿಮೀ, ಉತ್ತರ ಕನ್ನಡದ ಶಿರಸಿಯಲ್ಲಿ 40 ಮಿಮೀ ಮತ್ತು ಮಂಡ್ಯದ ಮಳವಳ್ಳಿಯಲ್ಲಿ 20 ಮಿಮೀ ಮಳೆ ಸುರಿದಿದೆ.

ಈ ಬಾರಿ ಬೇಗನೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ಪ್ರಕಾರ ಕೇರಳಕ್ಕೆ ಯಾವಾಗ ಮಾನ್ಸೂನ್ ಪ್ರವೇಶಿಸಲಿದೆ ಎಂಬುದರ ಬಗ್ಗೆ ನಿಖರವಾಗಿ ಹೇಳುವುದು ಸಾಧ್ಯವಿಲ್ಲ. ಮೇ ಕೊನೆಯ ವಾರದಲ್ಲಿ ಏನಾದರೂ ಸೈಕ್ಲೋನ್ ಸೃಷ್ಟಿಯಾದರೆ ಮಾರುತಗಳು ದುರ್ಬಲಗೊಂದು ಮಾನ್ಸೂನ್ ತಡವಾಗಿ ಪ್ರವೇಶಿಸಬಹುದು ಅಥವಾ ಮಾರುತಗಳು ಪ್ರಬಲಗೊಂದು ವಾಡಿಕೆಯಂತೆ ಮುಂಗಾರು ಪ್ರವೇಶಿಸಬಹುದು. ಮೇ ಕೊನೆಯ ವಾರದಲ್ಲಿ ಭಾರತೀಯ ಹವಾಮಾನ ಇಲಾಖೆ ಮುಂಗಾರು ಮಳೆ ಸಂಬಂಧ 2ನೇ ವರದಿ ಬಿಡುಗಡೆ ಮಾಡಲಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net