ರಾ.ಹ. ದೇಶಪಾಂಡೆ ಕೊಡುಗೆ ಸ್ಮರಣೀಯ

21 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾ.ಹ. ದೇಶಪಾಂಡೆ ಅವರಲ್ಲಿನ ಕನ್ನಡ ಅಭಿಮಾನ ಮಾದರಿಯಾಗಿದೆ. ಇಡೀ ಕನ್ನಡ ಜನಾಂಗ, ಸಂಸ್ಕೃತಿಯನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡದ ಶಾಲೆ, ಗ್ರಂಥಾಲಯ ಸ್ಥಾಪಿಸಿದ್ದಾರೆ ಎಂದು ಮೊಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ 9 ದಿನಗಳ ಕಾಲ ಆಯೋಜಿಸಿರುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಪಾಂಡೆ ಅವರ ಮಾದರಿಯಲ್ಲೇ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಾಡಿನಲ್ಲಿ ಕನ್ನಡ ಭಾಷೆಯ ರಕ್ಷಣೆಗೆ ಹಲವಾರು ಸಂಸ್ಥೆಗಳು ಹಾಗೂ ಪತ್ರಿಕೆಗಳು ಕೆಲಸ ಮಾಡಿವೆ. ಆ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ಅಭಿಮಾನದ ಹಲವಾರು ಕೆಲಸಗಳನ್ನು ಮಾಡುವ ಮೂಲಕ ನಾಡಿಗೆ ಮಾದರಿಯಾಗಿದೆ ಎಂದರು.
ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಡಾ.ಎಸ್​.ಎಂ.ಶಿವಪ್ರಸಾದ ಮಾತನಾಡಿ, ಪತ್ರಿಕೋದ್ಯಮದಲ್ಲಿ ಕನ್ನಡದ ಯೋಧರು ಪಾಪು. ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆ ಪಡೆದಿರುವುದು ಅಭಿಮಾನದ ಸಂಗತಿ ಎಂದರು.
ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ ಸ್ವೀಕರಿಸಿದ ಕನ್ನಡಮ್ಮ ದಿನಪತ್ರಿಕೆ ಸಂಪಾದಕ ರಾಜಕುಮಾರ ಟೋಪಣ್ಣವರ ಮಾತನಾಡಿದರು.
ಪ್ರಶಸ್ತಿಯು 50 ಸಾವಿರ ರೂ. ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅಭಿನಂದನಾ ನುಡಿಗಳನ್ನಾಡಿದರು.
ಚಂದ್ರಕಾಂತ ಬೆಲ್ಲದ, ಪದಾಧಿಕಾರಿಗಳಾದ ಬಸವಪ್ರಭು ಹೊಸಕೇರಿ, ಡಾ. ಸಂಜೀವ ಕುಲಕರ್ಣಿ, ಶಿವಾನಂದ ಭಾವಿಕಟ್ಟಿ, ಸತೀಶ ತುರಮರಿ, ವೀರಣ್ಣ ಒಡ್ಡಿನ್​, ಡಾ.ಧನವಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ, ಶಂಕರ ಕುಂಬಿ, ಗುರು ಹಿರೇಮಠ, ಇತರರು ಇದ್ದರು.
ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net