

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕೊಡಮಾಡುವ 2024ನೇ ಸಾಲಿನ `ಸಿರಿಗನ್ನಡಂ ಗೆಲ್ಗೆ' ರಾ.ಹ. ದೇಶಪಾಂಡೆ ಪ್ರಶಸ್ತಿಗೆ ಕಾಸರಗೋಡಿನ ನಾ. ಮೊಗಸಾಲೆ ಭಾಜನರಾಗಿದ್ದಾರೆ. ಡಾ. ವೀರಣ್ಣ ರಾಜೂರ, ಡಾ. ಜಿ.ಎಂ. ಹೆಗಡೆ, ಡಾ. ಧನವಂತ ಹಾಜವಗೋಳ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ ಆಯ್ಕೆ ಸಮಿತಿಯಲ್ಲಿದ್ದರು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಒಳಗೊಂಡಿದೆ. ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಾರಾಯಣ ಭಟ್ ಮೊಗಸಾಲೆ ಅವರು 1944ರ ಆ. 27ರಂದು ಕಾಸರಗೋಡು ತಾಲೂಕಿನ ಕೋಳ್ಯೂರು ಗ್ರಾಮದ ಮೊಗಸಾಲೆ ಮನೆತನದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮುಗಿಸಿ, ಉಡುಪಿ ಆಯುರ್ವೇದ ಕಾಲೇಜಿನಿಂದ ಡಿಎಸ್‌ಎಸಿ ಪದವಿ ಪಡೆದರು. ಕಾಂತಾವರದಲ್ಲಿ ಗ್ರಾಮೀಣ ಚಿಕಿತ್ಸಾಲಯ ತೆರೆದಾಗ ಅಲ್ಲಿ ವೈದ್ಯಾಽಕಾರಿಯಾಗಿ ನೇಮಕವಾದರು. 1966ರಲ್ಲಿ ಕಾಂತಾವರ ರೈತ ಯುವಕ ವೃಂದದ ಸ್ಥಾಪನೆ, 1976ರಲ್ಲಿ ಕನ್ನಡ ಸಂಘದ ಸ್ಥಾಪನೆ, 1978ರಲ್ಲಿ ಮೂಡಬಿದಿರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪನೆ, 2003ರಲ್ಲಿ ಕನ್ನಡ ಭವನ ನಿರ್ಮಾಣ, 2008ರಲ್ಲಿ ಅಲ್ಲಮಪ್ರಭು ಪೀಠದ ಸ್ಥಾಪನೆ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.