

ಮೈಸೂರು: ನಾನೇನು ಸನ್ಯಾಸಿನಾ? ನಾನೂ ಖಾದಿ ಬಟ್ಟೆ ಹಾಕಿದ್ದೇನೆ. ಮೊದಲು ಪಕ್ಷ ಅಧಿಕಾರಕ್ಕೆ ಬರಲಿ. ಆ ಬಳಿಕ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತೊಮ್ಮೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನನ್ನ ಸ್ವಯಿಚ್ಚೆಯಿಂದ ನಾನು ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ. ಮೈಸೂರು ಪತ್ರಕರ್ತರ ಸುದ್ದಿ ಬಹಳ ವೈಭವದಿಂದ ಇದೆ. ಇಲ್ಲಿಯ ಸುದ್ದಿಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಇಲ್ಲಿಯ ಲೋಕಲ್ ಮೀಡಿಯಾಗಳು ತುಂಬಾ ಸ್ಟ್ರಾಂಗ್ ಇದೆ ಎಂದರು.
ನಾನೇನು ಸನ್ಯಾಸಿನಾ?
ಎಸ್‌ಎಂ.ಕೃಷ್ಣ ನಂತರ ಒಕ್ಕಲಿಗರೊಬ್ಬರಿಗೆ ಸಿಎಂ ಆಗುವ ಅವಕಾಶ ಇದೆ ಎಂಬ ತಮ್ಮ ಭಾಷಣ ವಿಚಾರವಾಗಿ ಮಾತನಾಡಿದ ಡಿಕೆಶಿ, ನಾನೇನು ಸನ್ಯಾಸಿನಾ? ನಾನೂ ಖಾದಿ ಬಟ್ಟೆ ಹಾಕಿದ್ದೇನೆ. ಮೊದಲು ಪಕ್ಷ ಅಧಿಕಾರಕ್ಕೆ ಬರಲಿ. ಆ ಬಳಿಕ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಕೇವಲ ಒಕ್ಕಲಿಗ ಸಮುದಾಯ ಮಾತ್ರವಲ್ಲ, ರಾಜ್ಯದ ಇಡೀ ಸಮುದಾಯ ನನ್ನ ಜೊತೆ ನಿಲ್ಲುತ್ತೆ. ಅದರ ಮೇಲೆ ನನಗೆ ಬಹಳ ವಿಶ್ವಾಸ ಇದೆ ಎಂದು ಹೇಳಿದರು.
ಸರ್ಕಾರಿ ಹುದ್ದೆಗಳು ಬಹಿರಂಗವಾಗಿ ಮಾರಾಟ ಆಗ್ತಿವೆ
ಬಿಜೆಪಿ ಸರ್ಕಾರ ಬಂದ ಮೇಲೆ ಸಾಮನ್ಯ ಜನರ ಜದುಕಿಗೆ ತೊಂದರೆ ಆಗಿದೆ. ಇವತ್ತಿಗೂ ಕೋವಿಡ್‌ನಿಂದ ಸತ್ತವರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಇದೆಲ್ಲವನ್ನೂ ನಾವು ಬೆಳಕಿಗೆ ತಂದಿದ್ದೇವೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪರಿಹಾರ ಹಣ ಎಲ್ಲಿಗೆ ಕೊಟ್ಟಿದೆ ಅಂತ ಹೇಳಲು ಆಗುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಸರ್ಕಾರಿ ಹುದ್ದೆಗಳು ಬಹಿರಂಗವಾಗಿ ಮಾರಾಟ ಆಗ್ತಿವೆ. ಐಪಿಎಸ್ ಹಗರಣದಂತೆ ಪ್ರಪಚದಲ್ಲಿ ಎಲ್ಲೂ ನಡೆದಿಲ್ಲ. ಇದು ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲ ಬೇರೆ ಇಲಾಖೆಯಲ್ಲೂ ನಡೆದಿದೆ. ಇದನ್ನು ಕಲಬುರಗಿ ಚಾರ್ಜ್ಶೀಟ್ನಲ್ಲಿ ಆರೋಪಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಭ್ರಷ್ಟ ಸರ್ಕಾರ ಅಂತ ಹೆಸರು ಬಂದಿದೆ
40% ಕಮಿಷನ್ ಕೇಸ್ ಮುಚ್ಚಿ ಹಾಕಲಾಗ್ತಿದೆ. ಇಡೀ ದೇಶದಲ್ಲಿ ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ಭ್ರಷ್ಟ ಸರ್ಕಾರ ಅಂತ ಹೆಸರು ಬಂದಿದೆ. ಅವರ ಪಕ್ಷದವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ನೋಟಿಸ್ ಇಲ್ಲ. ಕೇವಲ ಪ್ರಿಯಾಂಕಾ ಖರ್ಗೆಗೆ ಯಾಕೆ ನೋಟಿಸ್ ಕಳುಹಿಸುತ್ತಾರೆ. ಇದೆಲ್ಲ ಸಾಮಾಜಿಕವಾಗಿ ಚರ್ಚೆ ಆಗಬೇಕು ಎಂದು ಒತ್ತಾಯಿಸಿದ ಡಿಕೆಶಿ, ರಾಜ್ಯ ಹಿತ ಕಾಯಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಪ್ರತಿಪಕ್ಷ ದುರ್ಬಲವಾಗಿದ್ದರೆ ಮಂತ್ರಿಗಳು ರಾಜೀನಾಮೆ ಕೊಡುತ್ತಿರಲಿಲ್ಲ. ನಾವು ಹಲವು ವಿಚಾರ ತೆಗೆದುಕೊಂಡು ಹೋರಾಟ ಮಾಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ
ಬೊಮ್ಮಾಯಿ ಸಾಧನ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಎಲ್ಲರು ಸಮಾವೇಶ ಮಾಡಬಹುದು ಎಂದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಾವು ಕೊಟ್ಟ ಬಹುತೇಕ ಭರವಸೆ ಈಡೇರಿಸಿದ್ದೇವೆ. ಆದರೆ, ಬಿಜೆಪಿ 40% ಕೂಡ ಮಾಡಿಲ್ಲ. ಅವರು ಏನು ಸಾಧನೆ ಮಾಡಿದ್ದಾರೆ ತಿಳಿಸಲಿ. ಕಾಂಗ್ರೆಸ್‌ನಲ್ಲಿ ಯಾವುದೇ ಬಣ ಇಲ್ಲ. ಇರುವುದು ಕಾಂಗ್ರೆಸ್ ಬಣ ಒಂದೇ. ನನಗೇ ಪಕ್ಷ, ಧ್ವಜ ಮುಖ್ಯ ಎಂದು ತಿಳಿಸಿದರು.
ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ
ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿ, ಮನುಷ್ಯನ ಬದುಕಿನಲ್ಲಿ ಹಲವು ಮೈಲುಗಲ್ಲುಗಳಿರುತ್ತವೆ. ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಸಿದ್ದರಾಮಯ್ಯನವರ ಇದುವರೆಗಿನ ಜೀವನವನ್ನು ಮೆಲುಕು ಹಾಕುವ ಸಲುವಾಗಿ ಸಿದ್ದರಾಮೋತ್ಸವ ಆಯೋಜನೆ ಮಾಡಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ನಾನು ಹಾಗು ರಾಹುಲ್ ಗಾಂಧಿಯವರು ಭಾಗಿಯಾಗುತ್ತೇವೆ. ನನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡೆ. ನಾನು ಪತ್ನಿ ಸಮೇತ ಕೇದಾರನಾಥಕ್ಕೆ ಹೋಗಿದ್ದೆ. ಹುಟ್ಟು ಹಬ್ಬ ಆಚರಣೆ ವಿಚಾರದಲ್ಲಿ ಒಬ್ಬೊಬ್ಬರ ಆಯ್ಕೆ ಒಂದೊಂದು ರೀತಿಯಾಗಿರುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರೊಬ್ಬರು ಮುಖ್ಯಮಂತ್ರಿ ಯಾಕಾಗಬಾರದು? ಎಂದರು.
130ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುತ್ತದೆ. 130ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಪಕ್ಷದ ವತಿಯಿಂದ ಸಮೀಕ್ಷೆ ನಡೆಸಲಾಗಿತ್ತು. ನಮಗೆ ಎಲ್ಲ ಕಡೆ ಒಳ್ಳೆಯ ವಾತಾವರಣ ಇದೆ. ಇಲ್ಲಿ ಯಾರೋ ಇಬ್ಬರೇ ಇಲ್ಲ. ಬೇಕಾದಷ್ಟು ನಾಯಕರು ಪಕ್ಷದಲ್ಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದ ಡಿಕೆಶಿ, ಬಿಜೆಪಿ, ಜೆಡಿಎಸ್ನ ಕೆಲ ನಾಯಕರು ಕಾಂಗ್ರೆಸ್ ಸೇರುವ ಸುಳಿವು ನೀಡಿದರು. ಅದರ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಅದನ್ನು ರಹಸ್ಯವಾಗಿ ಇಡುತ್ತೇನೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.