

ಧಾರವಾಡ: ಬೆಳ್ಳಂಬೆಳಗ್ಗೆ ಧಾರವಾಡದ ಬಾಡದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಚಾಲಕನ ಬದಲಾವಣೆಯೇ ಕಾರಣವಾಯ್ತಾ? ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಇಂದು ನಡೆಯಬೇಕಿದ್ದ ಮದುವೆ ರದ್ದಾಗಿದ್ದು, ವರನ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.
ಧಾರವಾಡ ತಾಲೂಕಿನ ಬಾಡ್ ಗ್ರಾಮದ ಬಳಿ ಮರಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 7 ಮಂದಿ ದಾರುಣ ಸಾವಿಗೀಡಾಗಿದ್ದಾರೆ. ಮೃತರೆಲ್ಲರೂ ಮದುವೆ ಗಂಡಿನ ಸಂಬಂಧಿಕರು. ಅನನ್ಯ(14) ವರನ ಅಕ್ಕನ ಮಗಳು. ಹರೀಶ(13) ಅಕ್ಕನ ಮಗ. ಶಿಲ್ಪಾ (34) ವರನ ಅತ್ತಿಗೆ. ನೀಲವ್ವ(60) ವರನ ಚಿಕ್ಕಮ್ಮ. ಮಧುಶ್ರೀ(20) ಅಣ್ಣನ ಮಗಳು. ಮಹೇಶ್ವರಯ್ಯ (11) ಅಕ್ಕನ ಮಗ. ಶಂಭುಲಿಂಗಯ್ಯ (35) ಗ್ರಾಮಸ್ಥ. ಅಪಘಾತದಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರೆಲ್ಲರು ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದವರು. ಎಲ್ಲರು ಮದುವೆ ಹೋಗಿದ್ದರು. ನಿಗದಿ ಗ್ರಾಮದಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಮಳೆ ಕಾರಣ ಮನ್ಸೂರ ರೇವಣಸಿದ್ದೇಶ್ವರ ಮಠಕ್ಕೆ ಸಂಬಂಧಿ ಯುವಕನ ಮದುವೆ ಸ್ಥಳಾಂತರವಾಗಿತ್ತು. ಇಂದು ಮದುವೆ ನಡೆಯಬೇಕಿತ್ತು. ಮದುವೆ ಮುನ್ನಾ ದಿನದ ಇಳೆ ಕಾರ್ಯಕ್ಕೆ ಹೋಗಿದ್ದರು. ಇಳೆ ಕಾರ್ಯದ ಊಟ ಮುಗಿಸಿ ಮತ್ತೆ ನಿಗದಿಗೆ ಬರುತ್ತಿದ್ದಾಗ ದುರಂತ ಘಟಿಸಿದೆ.
ಕ್ರೂಸರ್ಗೆ ಮೊದಲಿದ್ದ ಚಾಲಕ ಬೇರೆ. ಆ ಬಳಿಕ ಬಂದವನೇ ಬೇರೆ. ಕ್ರೂಸರ್ ವಾಹನ ವಧುವಿನ ಕಡೆಯವರನ್ನು ಕರೆದುಕೊಂಡು ಬಂದಿತ್ತು. ಅದೇ ಕ್ರೂಸರ್ನಲ್ಲಿ ನಿಶ್ಚಿತಾರ್ಥ ಕಾರ್ಯದ ಬಳಿಕ ನಿಗದಿಗೆ ಹೊರಟ್ಟಿದ್ದರು. ಇತ್ತ ಮದುವೆ ಮಳೆ ಕಾರಣದಿಂದ ಮನ್ಸೂರ ಕಲ್ಯಾಣ ಮಂಟಪಕ್ಕೆ ಸ್ಥಳಾಂತರವಾಗಿತ್ತು. ನಿಗದಿಯ ಮಂಜುನಾಥ ಜೊತೆ ಸವದತ್ತಿಯ ರೂಪಾ ಮದುವೆ ನಡೆಯಬೇಕಿತ್ತು.
ಮದುವೆಗೂ ಮುನ್ನ ಬೆಳಗ್ಗೆ ನಿದಗದಿಯಲ್ಲಿ ನಡೆಯಬೇಕಿದ್ದ ಮತ್ತೊಂದು ದೇವರ ಕಾರ್ಯಕ್ಕಾಗಿ ಮಧ್ಯರಾತ್ರಿಯೇ ಸಂಬಂಧಿಗಳು ನಿಗದಿಗೆ ಹೊರಟಿದ್ದರು. ಈ ವೇಳೆ ಚಾಲಕ ಬದಲಾಗಿದ್ದ. ಚಾಲಕ ಬದಲಾಗಿದ್ದನ್ನು ವಧುವಿನ ಕಡೆಯವರು ಗಮನಿಸಿದ್ದರು. ಅಪಘಾತದ ಬೆನ್ನಲ್ಲೇ ವಧುವಿನ ಕಡೆಯವರು ಕಲ್ಯಾಣ ಮಂಟಪವನ್ನು ಖಾಲಿ ಮಾಡಿದ್ದಾರೆ. ವಧುವಿನ ಕಡೆಯ ಸಂಬಂಧಿಗಳು ವಧುವಿನ ಬಟ್ಟೆ ಸೇರಿದಂತೆ ಇತರೆ ಸಾಮಗ್ರಿಗಳ ಸಮೇತ ಹಿಂತಿರುಗಿದ್ದಾರೆ. (ದಿಗ್ವಿಜಯ ನ್ಯೂಸ್)