ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿನ ನಿರ್ಬಂಧ ಮತ್ತಷ್ಟು ಸಡಿಲಿಕೆ: ಬಸ್​ ಸಂಚಾರಕ್ಕೆ ಅವಕಾಶ

BSY
Published on

ಬೆಂಗಳೂರು: ಕರೊನಾ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಲ್ಲಿನ ನಿರ್ಬಂಧಗಳಿಗೆ ರಾಜ್ಯ ಸರ್ಕಾರ ಮತ್ತಷ್ಟು ವಿನಾಯಿತಿ ನೀಡಿದ್ದು, ಶೇ. 50ರಷ್ಟು ಆಸನಗಳೊಂದಿಗೆ ರಾಜ್ಯವ್ಯಾಪಿ ಬಸ್​ ಸಂಚಾರಕ್ಕೆ ಅನುಮತಿಯನ್ನು ನೀಡಿದೆ.

ಕರೊನಾ ಅನ್​ಲಾಕ್​ ಸಂಬಂಧ ಇಂದು ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ಸಡಿಲಿಕೆ ಮಾಡಿದೆ. ಜನರು ಲಾಕ್​ಡೌನ್​ನಿಂದ ಸಮಸ್ಯೆ ಎದುರಿಸುತ್ತಿರುವುದರಿಂದ ಅನುಕೂಲವಾಗಲೆಂದು ಕೆಲವೊಂದು ಸಡಿಲಿಕೆ ಮಾಡಲಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ನಿಯಂತ್ರಿಸಲು ಸಹಕರಿಸಿದರೆ, ಅನ್​ಲಾಕ್​ ಯಶಸ್ವಿಯಾಗುತ್ತದೆ ಎಂದು ಸಿಎಂ ಬಿಎಸ್​ವೈ ಮಾಧ್ಯಮಗಳಿಗೆ ತಿಳಿಸಿದರು.

ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ 5% ಗಿಂತ ಕಡಿಮೆ ಪಾಸಿಟಿವಿಟಿ ದರ ಇದ್ದು, 13 ಜಿಲ್ಲೆಗಳಲ್ಲಿ ಶೇ.5-10 % ಇದ್ದು, ಮೈಸೂರಿನಲ್ಲಿ ಶೇ 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ. ಈ ಪಾಜಿಟಿವಿಟಿ ದರದ ಆಧಾರದ ಮೇಲೆ ನಿರ್ಬಂಧಗಳ ಸಡಿಲಿಕೆಗಳನ್ನು ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ಕೆಳಕಂಡಂತೆ ತೀರ್ಮಾನಿಸಲಾಗಿದೆ.

ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿ.ಬಿ.ಎಂ.ಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ಈ ಕೆಳಕಂಡ ಸಡಿಲಿಕೆಗಳನ್ನು ನೀಡಲಾಗಿದೆ.

ಎಲ್ಲಾ ಅಂಗಡಿಗಳನ್ನು ಸಂಜೆ 5.00 ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗುವುದು.

• ಎಸಿ. ಚಾಲನೆಗೊಳಿಸದೇ ಹೋಟೆಲ್‌, ಕ್ಲಬ್ಸ್‌, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗುವುದು.

• ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.

• ಬಸ್‌ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿದೆ.

• ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ.

• ಸರ್ಕಾರಿ/ಖಾಸಗಿ ಕಛೇರಿಗಳಿಗೆ ಶೇ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ.

• ಲಾಡ್ಜ್‌ ಗಳಲ್ಲಿ ಮತ್ತು ರೆಸಾರ್ಟ್‌ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.

• ಜಿಮ್‌ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.

• ಶೇ 5 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ದಿನಾಂಕ: 11-06-2021 ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.

• ಶೇ. 10 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರೆಯುವುದು.

ರಾಜ್ಯವ್ಯಾಪಿ ಅನ್ವಯವಾಗುವಂತೆ:

• ಪ್ರತಿ ದಿನ ನೈಟ್‌ ಕರ್ಫ್ಯೂ ರಾತ್ರಿ 07.00 ಗಂಟೆಯಿಂದ ಬೆಳಗ್ಗೆ 05 ಗಂಟೆವರೆಗೆ ಇರುತ್ತದೆ.

• ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 07.00 ಗಂಟೆಯಿಂದ ಸೋಮವಾರ ಬೆಳಿಗ್ಗ 05.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

• ಬಸ್‌ ಸಂಚಾರವು ಶೇ. 50 ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net