

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯವನ್ನು ಕಟ್ಟಿದವರು ಪಾವಟೆಯವರು. ನಂತರ ಅದನ್ನು ಬೆಳೆಸಿದವರಲ್ಲೊಬ್ಬರು ಡಾ. ಆರ್.ಸಿ ಹಿರೇಮಠ. ಅವರು ಸಂಶೋಧನೆಗೆ ಒಂದು ವಿವೇಕತೆ, ವಿನಯತೆ, ನಮ್ರತೆ, ತುಂಬಿದವರು. ಅವರ ಸಾಹಿತ್ಯ ಕೃಷಿ ಮಹಾವೃಕ್ಷವಾಗಿ ಬೆಳೆದು ನಿಂತಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ಆರ್.ಸಿ. ಹಿರೇಮಠ ದತ್ತಿ, ಮೂರುಸಾವಿರಮಠ ದತ್ತಿ, ಶ್ರೀ ಗುರುಸಿದ್ದೇಶ್ವರ ಕೋ. ಅಪ್ ಬ್ಯಾಂಕ್ ಲಿ. ದತ್ತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ವೀಣಾ ಬಿರಾದಾರ ಮಾತನಾಡಿ, ಹಬ್ಬಗಳ ಮಹತ್ವ ಮತ್ತು ಅವುಗಳು ನಮ್ಮ ಸಂಬಂಧ ಗಟ್ಟಿಗೊಳಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಕಾರ್ಯಕಾರಿ ನೂತನ ಮಹಿಳಾ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ವಿ.ಸಿ. ಸವಡಿ, ಶಾಂತವೀರ ಬೆಟಗೇರಿ, ಎಚ್.ಎಸ್. ಬಡಿಗೇರ, ಎಂ.ಜಿ. ಸುಬೇದಾರ, ಎಸ್.ಎಚ್. ಪ್ರತಾಪ, ಸುನಂದಾ ಉಡಾಲ, ಗೀತಾ ಕುಲಕಣಿರ್, ಇತರರು ಇದ್ದರು.