ಆರ್​.ಸಿ. ಹಿರೇಮಠ ಶರಣ ಸಂಸ್ಕೃತಿಯ ಚಿಂತಕ

17 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಡಾ. ಆರ್​.ಸಿ. ಹಿರೇಮಠ ಕನ್ನಡ ಸಾಹಿತ್ಯ ಲೋಕದ ಯುಗ ಪ್ರವರ್ತಕರು. ಖ್ಯಾತ ಸಂಶೋಧಕರಾದ ಅವರೊಬ್ಬ ಭಾಷಾ ವಿಜ್ಞಾನಿ. ಶರಣ ಸಂಸ್ಕೃತಿಯ ಚಿಂತಕರೂ ಆಗಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಎಸ್​. ಕೋಟಿಗೌಡರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಆರ್​.ಸಿ. ಹಿರೇಮಠ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಆರ್​.ಸಿ. ಹಿರೇಮಠ ಬದುಕು-ಬರಹ ಕುರಿತು ಮಾತನಾಡಿದರು.

ಡಾ. ಆರ್​.ಸಿ. ಹಿರೇಮಠ ತಮ್ಮ ಸ್ವ ಪ್ರತಿಭೆಯಿಂದಲೇ ಕುಲಪತಿಯಾದವರು. ಬಾಲ್ಯದಲ್ಲೇ ಪ್ರತಿಭಾನ್ವಿತರಾದ ಅವರು, ಬಡತನದಿಂದ ಬೆಂದು ಕಂತಿ ಭಿಕ್ಷೆ ಬೇಡಿ ವಿದ್ಯೆ ಪಡೆಯಬೇಕಾಯಿತು. ಡಾ. ಡಿ.ಸಿ. ಪಾವಟೆ ಮಾರ್ಗದರ್ಶನದಲ್ಲಿ ಕವಿವಿಯಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ಶ್ರಮಪಟ್ಟರು. ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯದ ಜತೆಗೆ ಭಾಷಾ ಶಾಸ್ತ್ರದಂತಹ ಅಧ್ಯಯನಗಳಿಗೆ ಅವಕಾಶ ಕಲ್ಪಿಸಿದರು. ನಾಡಿನ ವಿವಿಧೆಡೆ ಸಂಚರಿಸಿ ವಚನ ಸಾಹಿತ್ಯದ ಸುಮಾರು 10 ಸಾವಿರ ಹಸ್ತಪ್ರತಿ ಸಂಗ್ರಹಿಸಿ ಅಧ್ಯಯನಕ್ಕೆ ಅನುಕೂಲಿಸಿದ್ದಾರೆ ಎಂದರು.

ಅಧ್ಯತೆ ವಹಿಸಿದ್ದ ವೀರಣ್ಣ ಒಡ್ಡೀನ ಮಾತನಾಡಿ, ಡಾ. ಡಿ.ಸಿ. ಪಾವಟೆ ಕವಿವಿ ನಿರ್ಮಾತೃ. ಡಾ. ಆರ್​.ಸಿ. ಹಿರೇಮಠ ಅದನ್ನು ಉನ್ನತ ಮಟ್ಟಕ್ಕೆ ಬೆಳೆಸಿದವರಲ್ಲೊಬ್ಬರು. ಸಾಧಾರಣ ಕುಟುಂಬದಲ್ಲಿ ಹುಟ್ಟಿ ಅಸಾಧಾರಣವಾಗಿ ಬೆಳೆದು ಸಾಧನೆ ಶಿಖರವನ್ನೇರಿದರು ಎಂದರು.

ದತ್ತಿ ದಾನಿ ಡಾ. ಶಶಿಕಲಾ ಹಿರೇಮಠ, ಬಿ.ಎಸ್​. ಶಿರೋಳ, ಶಿವಾನಂದ ಹೂಗಾರ, ಡಾ. ಶ್ರೀಧರ ಗಸ್ತಿ, ಕೆ.ಎಂ. ಅಂಗಡಿ, ಮಹಾಂತೇಶ ನರೇಗಲ್​, ಸಿದ್ಧಾರೂಢ ಗುಗ್ಗರಿ, ಅಂಬರೀಶ ರಾಠೋಡ, ರವಿ ಬಿರಾದಾರ, ರಾಹುಲ ಉಪ್ಪಾರ, ಮಹಮ್ಮದ ವಾಲಿಕಾರ, ಇತರರು ಇದ್ದರು.

ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net