ಬೆಂಗ್ಳೂರಲ್ಲಿ ಡೆಡ್ಲಿ ಕಾರು ಅಪಘಾತ: ತಮಿಳುನಾಡು ಶಾಸಕನ ಒಬ್ಬನೇ ಪುತ್ರ ಸಾವು, ಒಟ್ಟು 7 ಮಂದಿ ದುರಂತ ಅಂತ್ಯ

MLA Son
Published on

ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ ಎಂದು ತಿಳಿದುಬಂದಿದೆ.

ಶಾಸಕ ಹಾಗೂ ಕಂಟ್ರಕ್ಷನ್ಸ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹೊಸೂರು ಶಾಸಕ ಪ್ರಕಾಶ್ ಪುತ್ರ ಕರುಣಾಸಾಗರ್​ ಭೀಕರವಾಗಿ ಸಾವಿಗೀಡಾಗಿದ್ದಾರೆ. ಬ್ಲೂ ಮೆಟಲ್ಸ್ ಎಂಬ ಎಂಸ್ಯಾಂಡ್ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿರುವ ಶಾಸಕ ವೈ ಪ್ರಕಾಶ್ ಅವರ ಪತ್ನಿ ಕೂಡ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ತಮಿಳುನಾಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಪತ್ನಿ ಮೃತಪಟ್ಟಿದ್ದರು. ಇದೀಗ ಡೆಡ್ಲಿ ಕಾರು ಅಪಘಾತದಲ್ಲಿ ಮಗನೂ ಕೊನೆಯುಸಿರೆಳೆದಿದ್ದಾನೆ.

ವೈ ಪ್ರಕಾಶ್ ಅವರು ಹೊಸೂರು ಕ್ಷೇತ್ರದ ಶಾಸಕರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೊಸೂರಿನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ವೈ ಪ್ರಕಾಶ್ ಚುನಾವಣೆಗೆ ಸಿದ್ದರಾಮಯ್ಯ, ರಾಮಲಿಂಗ ರೆಡ್ಡಿ ಹಾಗೂ ಡಿಕೆ ಸುರೇಶ್ ಕೂಡ ಪ್ರಚಾರಕ್ಕೆ ಹೋಗಿದ್ದರು.

ಸದ್ಯ ಅಪಘಾತವಾಗಿರುವ ಆಡಿ ಕ್ಯೂ 3 ಕಾರು ಬ್ಲೂ ಮೆಟಲ್ ಕಂಪನಿ ರಿಜಿಸ್ಟ್ರೇಷನ್​ನಲ್ಲಿದೆ. ನಿನ್ನೆ ಸಂಜೆ ಕಟ್ಟಡದ ಸಾಮಾಗ್ರಿಗಳನ್ನು ಖರೀದಿಸಲು ಕರುಣಾಸಾಗರ್​ ಬೆಂಗಳೂರಿಗೆ ಬಂದಿದ್ದ. ರಾತ್ರಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿಯು ದುರಂತ ಅಂತ್ಯ ಕಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ಕು ಪುರುಷರಾಗಿದ್ದಾರೆ.

ಮೃತರನ್ನು ದಂಪತಿಯಾದ ಕರುಣಾಸಾಗರ, ಬಿಂದು (28), ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್ ಮತ್ತು ರೋಹಿತ್ (23) ಎಂದು ಗುರುತಿಸಲಾಗಿದೆ. 6 ಜನ ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬಿಂದು ಕರುಣಾಸಾಗರ್​ ಮದುವೆಯಾಗಬೇಕಿದ್ದ ಯುವತಿ ಎಂದು ತಿಳಿದುಬಂದಿದೆ.

ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿ ಹೆಸರಲ್ಲಿ ಆಡಿ Q3 ಕಾರು ಖರೀದಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿ ಮೂಲದ ಕಂಪನಿ ಹೆಸರಿನಲ್ಲಿ ಕಾರು ನೊಂದಣಿಯಾಗಿದೆ. 2015ರ ನವೆಂಬರ್​ನಲ್ಲಿ ಬೆಂಗಳೂರಿನಲ್ಲಿ ಕಾರನ್ನು ಖರೀದಿಸಲಾಗಿತ್ತು. ಬೆಂಗಳೂರು ಪೂರ್ವ ಆರ್.ಟಿ.ಓ ಕಚೇರಿಯಲ್ಲಿ ಕಾರು ರಿಜಿಸ್ಟೇಷನ್ ಆಗಿತ್ತು. ಅಪಘಾತವಾದ ಕಾರನ್ನು ಸದ್ಯ ಸಂಜೀವಿನಿ ಬ್ಲೂ‌ ಮೆಟಲ್ಸ್ ಕಂಪನಿಯವರೇ ಬಳಸ್ತಿದ್ದಾರ ಅಥವಾ ಬೇರೆಯವರಿಗೆ ಮಾರಾಟ ಮಾಡಿದ್ದಾರಾ ಅನ್ನೊದರ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಆರ್.ಟಿ.ಒ ದಾಖಲೆಯಲ್ಲಿ ತಮಿಳುನಾಡಿನ ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿ ಹೆಸರಲ್ಲೇ ಇದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net