ಆಟೋಗೆ ಬೈಕ್​ ಟಚ್​ ಆಗಿದ್ದಕ್ಕೆ ಕೊಲೆ: ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದು ಪೊಲೀಸರಿಗೆ ಶರಣು!

Young Man
ಕೊಲೆಯಾದ ಸುಹಾಸ್​
Published on

ಬೆಂಗಳೂರು: ನಗರದ ಬೊಮ್ಮನಹಳ್ಳಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಸುಹಾಸ್ ಎಂಬಾತನನ್ನು ಕೊಲೆ ಮಾಡಿರುವ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಬಂದು ಶರಣಾಗಿದ್ದಾರೆ.

ಏ. 9 ರಂದು ಬೊಮ್ಮನಹಳ್ಳಿ ಠಾಣೆಯಲ್ಲಿ ಸುಹಾಸ್ ಕಿಡ್ನಾಪ್ ಆಗಿದ್ದಾನೆಂದು ದೂರು ನೀಡಲಾಗಿತ್ತು. ಯುಗಾದಿ ಹಬ್ಬದ ದಿನ ಆರೋಪಿ ಕಾಂತನ ಆಟೋಗೆ ಸುಹಾಸ್ ಬೈಕ್ ಟಚ್ ಮಾಡಿದ್ದ‌‌‌. ಈ ವಿಚಾರಕ್ಕೆ ಅಂದು ಸುಹಾಸ್​ ಮತ್ತು ಕಾಂತ ಕೈ ಕೈ ಮೀಲಾಯಿಸಿಕೊಂಡಿದ್ದರು. ಅಲ್ಲದೆ, ಅಂದೇ ಸುಹಾಸ್ ಮೇಲೆ ತನ್ನ ಗ್ಯಾಂಗ್​ನಿಂದ ಕಾಂತ ಹಲ್ಲೆ ನಡೆಸಿದ್ದ.

ಈಗಲಾಟೆ ವಿಚಾರ ಠಾಣೆವರೆಗೂ ಹೋಗಿ ಇಬ್ಬರಿಗೂ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದರು. ಆದ್ರೆ ಅಂದು ಸುಮ್ಮನಾಗಿದ್ದ ಕಾಂತ ಏಪ್ರಿಲ್‌ 9 ರಂದು ಬೇರೆಯವರ ಮೂಲಕ ಸುಹಾಸ್​ ಕರೆಸಿಕೊಂಡು ತನ್ನ ಗ್ಯಾಂಗ್​ ಜತೆ ಸುಹಾಸ್​ನನ್ನು ಕಿಡ್ನಾಪ್ ಮಾಡಿದ್ದ. ಬಳಿಕ ಕೊಲೆ ಮಾಡಿ ಎಲೆಕ್ಟ್ರಾನಿಕ್ ಸಿಟಿಯ ನೀಲಗಿರಿ ತೋಪಿನ ಬಳಿ ಶವ ಎಸೆದಿದ್ದರು.

ಕೊಲೆ ಮಾಡಿದ ಬಳಿಕ ತಿರುಪತಿಗೆ ತೆರಳಿ ವೆಂಕಟೇಶ್ವರ ದೇವಸ್ಥಾನದಲ್ಲಿ ಆರೋಪಿಗಳು ಮುಡಿ ಕೊಟ್ಟಿದ್ದರು. ದೇವಸ್ಥಾನದಿಂದ ಬಂದವರೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net