ಅಪರಿಚಿತನ ಪುಂಡಾಟಕ್ಕೆ ಹೈರಾಣಾದ ಫ್ಯಾಮಿಲಿ: ಮಧ್ಯರಾತ್ರಿ ಕಾರಿನಲ್ಲಿ ಚೇಸ್​ ಮಾಡಿ ಬಂದು ಅಸಭ್ಯ ವರ್ತನೆ

1201424
Published on

ಬೆಂಗಳೂರು: ಮಕ್ಕಳ ಜತೆಗೆ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ದೀಪಾ ಶ್ರೀಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇರೆಗೆ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಶೋಧ ನಡೆಸುತ್ತಿದ್ದಾರೆ.

ಮಗಳು ಹಾಗೂ ಪುತ್ರನೊಂದಿಗೆ ದೀಪಾ ಶುಕ್ರವಾರ ಹೊಸಕೋಟೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ತಡರಾತ್ರಿ 2ಗಂಟೆಗೆ ಮನೆಗೆ ವಾಪಾಸ್ಸಾಗುತ್ತಿದ್ದರು. ಮಾರ್ಗಮದ್ಯೆ ಹೆಬ್ಬಾಳ ಬಳಿ ಕಾರಿನ ಟೈರ್ ಪಂಕ್ಚರ್ ಆಗಿತ್ತು. ಟೈರ್ ಬದಲಿಸುತ್ತಿದ್ದಾಗ ಅಪರಿಚಿತ ಕಾರೊಂದು ಇವರ ಪಕ್ಕ ಬಂದು ನಿಂತಿತ್ತು. ಆ ಕಾರಿನಲ್ಲಿದ್ದ ವ್ಯಕ್ತಿ ದೀಪಾ ಪುತ್ರಿಗೆ ಅಸಭ್ಯವಾಗಿ ಪ್ರಶ್ನಿಸಿದ್ದ. ಆ ವೇಳೆ ದೀಪಾ ಆತನಿಗೆ ಬೈದು ಕೂಡಲೇ ಕಾರ್ ಹತ್ತಿ ಹೊರಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಗೊರಗುಂಟೆಪಾಳ್ಯದವರೆಗೂ ಇವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಹೆದರಿದ ದೀಪಾ ಪೊಲೀಸರಿಗೆ ಕರೆ ಮಾಡಿ ನಡೆದ ಸಂಗತಿ ವಿವರಿಸಿದ್ದರು. ಇವರು ಗೊರಗುಂಟೆಪಾಳ್ಯ ತಲುಪುತ್ತಿದ್ದಂತೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಪೊಲೀಸರನ್ನು ಕಂಡ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದರಿಂದ ಆತಂಕಗೊಂಡ ದೀಪಾ ಮಕ್ಕಳ ಜತೆಗೆ ರಾತ್ರಿಯಿಡಿ ಆರ್​ಎಂಸಿ ಯಾರ್ಡ್ ಠಾಣೆಯಲ್ಲೇ ಉಳಿದಿದ್ದರು. ದೀಪಾ ದೂರಿನೊಂದಿಗೆ ಆರೋಪಿಯ ಕಾರಿನ ನಂಬರನ್ನೂ ಸಹ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ವೈರಲ್
ಮಹಿಳೆ ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್ ಕಂಟ್ರೋಲ್ ರೂಮ್​ ಕರೆ ಮಾಡಿ ಸಂಭಾಷಣೆ ನಡೆಸುತ್ತಿರುವುದನ್ನು ಜತೆಗಿದ್ದವರು ವಿಡಿಯೋ ಮಾಡಿದ್ದಾರೆ. ಎದುರಿಗಿನ ಕಾರಿನಲ್ಲಿದ್ದ ವ್ಯಕ್ತಿ ಇವರ ಕಾರಿನ ಸಮೀಪಕ್ಕೆ ಆಗಮಿಸುತ್ತಿರುವುದು, ಮಹಿಳೆ ಆತಂಕಗೊಂಡಿರುವುದು ಇದರಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net