ಬಿಬಿಎಂಪಿ ಬೀಗ ಜಡಿಯುತ್ತಿದ್ದಂತೆ ಅಲರ್ಟ್​ ಆದ ಮಂತ್ರಿ ಮಾಲ್​: 5 ಕೋಟಿ ರೂ. ಚೆಕ್​ ವಿತರಣೆ

Mantri Mall
Published on

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟುವಂತೆ ಸಾಕಷ್ಟು ನೊಟಿಸ್​ ಕಳುಹಿಸಿದರೂ ಕ್ಯಾರೆ ಎನ್ನದ ಮಂತ್ರಿ ಮಾಲ್​ಗೆ ಬಿಬಿಎಂಪಿ ಅಧಿಕಾರಿಗಳು ಗುರುವಾರ (ಸೆ.30) ಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಂತ್ರಿ ಮಾಲ್​ ಆಡಳಿತ ಮಂಡಳಿ ಸ್ಥಳದಲ್ಲಿ ಬಿಬಿಎಂಪಿಗೆ 5 ಕೋಟಿ ರೂ. ಚೆಕ್​ ನೀಡಿದೆ.

ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ಮಂತ್ರಿ ಮಾಲ್​ ತೆರಿಗೆ ಪಾವತಿ ಮಾಡುತ್ತಿದೆ. ಆದರೆ, 2017ರ ಬಳಿಕ ಇದೂವರೆಗೂ ಮಂತ್ರಿ ಮಾಲ್​ ಆಸ್ತಿ ತೆರಿಗೆ ಕಟ್ಟಿಲ್ಲ. ಬಡ್ಡಿ ಸೇರಿದಂತೆ ಬರೋಬ್ಬರಿ 37 ಕೋಟಿ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ. ತೆರಿಗೆ ಕಟ್ಟುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಮಂತ್ರಿ ಮಾಲ್​ ಮತ್ತೆ ತೆರಿಗೆ ಕಟ್ಟದೇ ವಂಚಿಸಿತ್ತು. ಹೀಗಾಗಿ ಇಂದು ಮಂತ್ರಿ ಮಾಲ್​ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದರು. ಈ ಹಿಂದೆಯೂ ಒಮ್ಮೆ ಬೀಗ ಜಡಿಯಲಾಗಿತ್ತು.

ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲೇ ಮಂತ್ರಿ ಮಾಲ್ ಇದೆ. ಇದೀಗ ಬೀಗ ಜಡಿದಿರುವ ಕಾರಣ ಶಾಪಿಂಗ್​ಗೆ ಬಂದವರು ನಿರಾಶೆಯಿಂದ ವಾಪಸ್​ ಹೋಗುವಂತಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net