

ಬೆಂಗಳೂರು: ಹಿರಿಯ ನಾಯಕ, ವಿಧಾನ ಪರಿಷತ್ ನಲ್ಲಿ ದಾಖಲೆಯ 45 ವರ್ಷಗಳ ಕಾಲ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅನುಭವಕ್ಕೆ ತಕ್ಕಂತೆ ಅವಕಾಶ ನೀಡುವ ಬಗ್ಗೆ ಬಿಜೆಪಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪರಿಷತ್ ಸಭಾಪತಿ ಹಾಗೂ ಸದಸ್ಯತ್ವಕ್ಕೆ ಹೊರಟ್ಟಿ ನೀಡಿದ ರಾಜೀನಾಮೆ ಅಂಗೀಕಾರವಾದ ಮರುದಿನವೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು. ಸಿಎಂ ಜತೆಗೆ ಸಚಿವರು, ಪಕ್ಷದ ರಾಜ್ಯ ನಾಯಕರು ಅವರಿಗೆ ಬುಧವಾರ ಬಿಜೆಪಿ ಬಾವುಟ ನೀಡಿ ಬರಮಾಡಿಕೊಂಡರು.
ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ಸೇರ್ಪಡೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಷ್ಟರಲ್ಲೇ ನಡೆಯಲಿದೆ ಎಂದರು. ಹೊರಟ್ಟಿ ಬಂದಿರುವುದರಿಂದ ಬಿಜೆಪಿಗೆ ಆನೆಬಲ ಬಂದಂತಾಗಿದ್ದು, ಉತ್ತರಕರ್ನಾಟಕದಲ್ಲಿ ಪಕ್ಷ ಇನ್ನಷ್ಟು ಸದೃಢವಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.