VIDEO| ಈಗಲಾದ್ರೂ ಈ ಪುಟ್ಟ ಪೋರಿಯ ಮಾತನೊಮ್ಮೆ ಕೇಳಿ ಕರೊನಾಗೆ ಬೈ ಬೈ ಹೇಳಿ..!

BGK Girl
Published on

ಬಾಗಲಕೋಟೆ: ಬಾಗಲಕೋಟೆಯ 8 ವರ್ಷದ ಪುಟ್ಟ ಪೋರಿಯೊಬ್ಬಳು ವಿಡಿಯೋ ಸಂದೇಶದ ಮೂಲಕ ಮಹಾಮಾರಿ ಕರೊನಾ ವೈರಸ್​ ಕುರಿತು ಜಾಗೃತಿ ಮೂಡಿಸಿದ್ದು, ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ.

ಬಾಗಲಕೋಟೆ ನಗರದ ವೈಷ್ಣವಿ ಬಾದವಾಡಗಿ ಎಂಬ ಬಾಲಕಿ ಕರೊನಾ ಜಾಗೃತಿ ಪಾಠ ಮಾಡಿದ್ದಾಳೆ. ಅಲ್ಲದೆ, ನಿಯಮ ಉಲ್ಲಂಘನೆ ಬಗ್ಗೆ ಚಾಟಿಯನ್ನು ಬೀಸಿದ್ದಾಳೆ. ಜನರು ಕರೊನಾ ರೂಲ್ಸ್ ಪಾಲಿಸುತ್ತಿಲ್ಲ. ಕಳೆದ ವರ್ಷ ನಾನು ಮೊದಲನೇ ವಿಡಿಯೋದಲ್ಲೂ ಕರೊನಾ ಮುಂಜಾಗ್ರತಾ ಕ್ರಮದ ಬಗ್ಗೆ ಹೇಳಿದ್ದೆ. ಇದೀಗ ರೂಲ್ಸ್ ಪಾಲಿಸದಿದ್ದಕ್ಕೆ ಎರಡನೇ ಅಲೆ ಹೆಚ್ಚಾಗುತ್ತಿದೆ ಎಂದಿದ್ದಾಳೆ.

ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕರೊನಾ ಬಂದರೆ, ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಮ್ಲಜನಕ ಸಿಗ್ತಿಲ್ಲ. ಸತ್ತರೆ ಸುಡೋದಕ್ಕೂ ಸಹ ಜಾಗ ಇಲ್ಲ. ಇಂತಹ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿಯಮ ಪಾಲಿಸಿ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ತರಕಾರಿ ಹಾಗೂ ದಿನಸಿ ತರುವುದಕ್ಕೆ ಮಾತ್ರ ಹೋಗಿ ಎಂದು ಬಾಲಕಿ ಮನವಿ ಮಾಡಿಕೊಂಡಿದ್ದಾಳೆ.

ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಹಾಕಿಕೊಳ್ಳಿ. ಸ್ಯಾನಿಟೈಸರ್ ಜೊತೆಯಲ್ಲಿಟ್ಟುಕೊಳ್ಳಿ ಎಂದು ಸಲಹೆ ನೀಡಿರುವ ಪುಟ್ಟ ಪೋರಿ, ಈಗಲಾದರೂ ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಳ್ಳಿ. ಸರ್ಕಾರದ ನಿಯಮಗಳನ್ನು ಪಾಲಿಸಿ. ಹೆಚ್ಚೆಚ್ಚು ಮರಗಳನ್ನು ಬೆಳೆಸಿ ಆಕ್ಸಿಜನ್ ಸಿಗುತ್ತದೆ ಎಂದು ಜನತೆಗೆ ಕೈಮುಗಿದು ವೈಷ್ಣವಿ ಕೇಳಿಕೊಂಡಿದ್ದಾಳೆ. ಇದೀಗ ಬಾಲಕಿಯ ಕರೊನಾ ಜಾಗೃತಿ ಮಾತಿಗೆ ಜನರು ಫಿದಾ ಆಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net