ರಾಜ್ಯ ಕಾಂಗ್ರೆಸ್ ಸರ್ಕಾರ ಬರ್ಬಾದ್: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ

rashok
Published on

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಬರ್ಬಾದ್ ಆಗಿದೆ. ಗ್ಯಾರಂಟಿ ಯೋಜನೆಗೆ ಕೊಡುವುದಕ್ಕೂ ಅವರ ಬಳಿ ಹಣವಿಲ್ಲ. ನೌಕರರಿಗೆ ಸಂಬಳ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡಲೂ ದುಡ್ಡಿಲ್ಲ. ಒಟ್ಟಾರೆ ಪಾಪರ್‌ನಿಂದ ಎಸ್ಕೇಫ್ ಆಗಲು ದಾರಿಯೇ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ಮೈಸೂರು ಮುಡಾ ಹಗರಣದ ವಿರುದ್ಧ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ನಿಲ್ಲಿಸಿದರೆ ದೇಶದಲ್ಲೇ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಅದಕ್ಕಾಗಿ ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಕೆ ಮಾಡಿದ್ದಾರೆ. ಇದು ದೊಡ್ಡ ಅಪರಾಧ. ಅದರ ವಿರುದ್ದ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ. ಹಗರಣ ಆಗಿದ್ದರೂ ಸಿಎಂ ರಾಜೀನಾಮೆ ಕೊಡುವುದಿಲ್ಲ ಎನ್ನುತ್ತಾರೆ. ಡಿ.ಕೆ.ಶಿವಕುಮಾರ್ ಯಾರೇ ಬೈದರೂ ನೀರಿನ ದರ ಏರಿಕೆ ಮಾಡದೆ ಇರಲ್ಲವೆನ್ನುತ್ತಾರೆ. ಅವರಿಗೆ ತಮ್ಮ ಸರ್ಕಾರ ಇರಲ್ಲ ಎನ್ನುವುದು ಗ್ಯಾರಂಟಿಯಾಗಿದೆ. ಆದ್ದರಿಂದ ತೊಘಲಕ್ ಆಡಳಿತ ಮಾಡುತ್ತಿದ್ದಾರೆ. ನೀರು ದರ ಏರಿಕೆ ಮಾಡಿದರೆ ಬೆಂಗಳೂರು ಶಾಸಕರು, ಬಿಜೆಪಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ಕ್ಷಣಕ್ಷಣಕ್ಕೂ ತಮ್ಮ ಹೇಳಿಕೆ ಬದಲಾವಣೆ ಮಾಡುತ್ತಿದ್ದಾರೆ. ಮೊದಲು ನಾನು ಸೈಟ್ ಕೇಳಿಲ್ಲ ಎಂದರು. ಈಗ ವೈಟ್ನರ್ ವಿಚಾರ ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ಯಾರನ್ನು ಜೈಲಿಗೆ ಹಾಕಬೇಕು ಎಂದು ಹೇಳುವುದು ನ್ಯಾಯಾಂಗ ವ್ಯವಸ್ಥೆ. ನಾವು ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ವಿರುದ್ಧ ಅಲ್ಲ. ಭ್ರಷ್ಟಾಚಾರ, ಭ್ರಷ್ಟಾಚಾರಿಗಳ ವಿರುದ್ಧ. ಜಾತಿ, ಧರ್ಮದ ಹೋರಾಟ ಮಾಡುತ್ತಿಲ್ಲ. ಕೊಲೆಗಾರ, ಕಳ್ಳ, ಅತ್ಯಾಚಾರಿಗೆ ಜಾತಿ ಇರುವುದಿಲ್ಲ. ಯಾವಾಗ ಅವರಿಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲವೋ ಆಗ ಜಾತಿ ಹೆಸರು ತರುತ್ತಾರೆ. ಅದೇ ರೀತಿ ಕಾಂಗ್ರೆಸ್ ಅವರು ಈಗ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಛೇಡಿಸಿದರು.

ಸಿದ್ದರಾಮಯ್ಯ ಅವರೇ ಜಾತಿ ಹೆಸರಿನಲ್ಲಿ ಕಾನೂನು ತಿದ್ದುಪಡಿ ಮಾಡಿಬಿಡಿ. ಪೊಲೀಸರು ಅದೇ ರೀತಿ ನಡೆದುಕೊಳ್ಳುತ್ತಾರೆ. ರಾಜ್ಯದ ಜನರು ಜಾತಿ ನೋಡಿ ಮತ ಹಾಕಿದ್ದಾರಾ?. 50*80 ಸೈಟ್ ಅಕ್ರಮ ಮಾಡಿಕೊಳ್ಳುವುದಕ್ಕೆ ಆಗಲ್ಲ. ಆದರೆ ಸಿದ್ದರಾಮಯ್ಯ ಅಂತಹ ನಿವೇಶನವನ್ನು ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಭಂಟ ಮುಡಾ ಅಧ್ಯಕ್ಷ ಮರಿಗೌಡನೇ ಮುಡಾದಲ್ಲಿ ಹಗರಣ ಆಗಿದೆ ಎಂದು ಪತ್ರ ಬರೆದಿದ್ದಾರೆ. ಆ ಬಳಿಕ ಸಿದ್ದರಾಮಯ್ಯ ಕಥೆ ಆಚೆಗೆ ಬಂದಿದ್ದು. ಸಿದ್ದರಾಮಯ್ಯ ನಾನು ಬಹಳ ಕ್ಲೀನ್ ಎಂದಿದ್ದರು. ಈಗ ಒಂದಾದ ಮೇಲೆ ಒಂದು ವಿಚಾರ ಆಚೆ ಬರುತ್ತಿವೆ ಎಂದು ಟೀಕಿಸಿದರು.

ಮೊದಲು ನಾವು ಸೈಟ್‌ಗೆ ಅರ್ಜಿ ಕೊಟ್ಟಿಲ್ಲ ಎಂದರು. ಈಗ ವೈಟ್ನರ್ ಹಾಕಿರುವುದು ಬೆಳಕಿಗೆ ಬಂದಿದೆ. ವಿಜಯನಗರದಲ್ಲೇ ಸೈಟ್ ಬೇಕು ಎಂದು ಪತ್ರ ಬರೆದಿದ್ದರು, ಅದಕ್ಕೆ ವೈಟ್ನರ್‌ಗೆ ಹಾಕಿದ್ದಾರೆ. ದಾಖಲೆಗಳನ್ನು ತಿದ್ದುವ ಕೆಲಸ ಮಾಡಲಾಗುತ್ತಿದೆ. ಮುಡಾದಲ್ಲಿ ಸಾವಿರಾರು ಸೈಟ್‌ಗಳನ್ನು ಅಕ್ರಮವಾಗಿ ಮಾಡಿಕೊಂಡಿದ್ದಾರೆ. ದೊಡ್ಡ ದೊಡ್ಡ ತಿಮಿಂಗಿಲಗಳು ಇದರಲ್ಲಿ ಇವೆ. ಆದ್ದರಿಂದ ಈ ಹಗರಣವನ್ನು ಸಿಬಿಐಗೆ ನೀಡಿ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net