ಮಗ ಅಲ್ಲ, ರಾಜ್ಯದ ಜನರು ಹೊಗಳಲಿ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟಾಂಗ್

R Ashok
Published on

ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಕುಟುಂಬದ ಚಿನ್ನಾಭರಣ ಅಡವಿಟ್ಟು ಕೆಆರ್‌ಎಸ್ ಡ್ಯಾಂ ಕಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಮೈಸೂರಲ್ಲಿ ಇದ್ದ ಸೈಟ್‌ಗಳನ್ನು ಅವರ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ. ಆದ್ದರಿಂದ ಎಲ್ಲಿಂದ ಎಲ್ಲಿಗೆ ಹೋಲಿಕೆ ಮಾಡುವುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಸಿದ್ದರಾಮಯ್ಯ ಕೊಡುಗೆ ಅಪಾರ ಎಂಬ ವಿಧಾನ ಪರಿಷತ್ ಸದಸ್ಯ ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದರು. ತಲೆ ಕೆಟ್ಟಿರೋರು, ಇತಿಹಾಸದ ಪರಂಪರೆ ಗೊತ್ತಿಲ್ಲದವರು ಈ ರೀತಿ ಹೇಳುತ್ತಾರೆ. ತಂದೆ ಮೇಲೆ ಅಭಿಮಾನ ಇರಬೇಕು, ಅಂದಾಭಿಮಾನ ಇರಬಾರದು. ಸಿದ್ದರಾಮಯ್ಯ ಬಹಳ ಅನುದಾನ ಕೊಟ್ಟಿದ್ದಾರೆಂದರೆ ಅವರ ಮನೆಯಿಂದ ಕೊಟ್ಟಿದ್ದಾರಾ?. ಅನುದಾನ ಹೆಚ್ಚು ಕೊಟ್ಟರೆ ವಿಧಾನಸಭೆಯಲ್ಲಿ ಚರ್ಚೆ ಮಾಡಲಿ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಯಾರು ಎಷ್ಟು ಕೊಟ್ಟಿದ್ದಾರೆ ಎಂದು ಹೇಳಲಿ. ಅದನ್ನು ಬಿಟ್ಟು ಮೈಸೂರು ಮನೆತನವನ್ನು ಹೋಲಿಕೆ ಮಾಡಿಕೊಳ್ಳುವುದಲ್ಲ ಎಂದರು.

ಮೊದಲು ಡಿ.ದೇವರಾಜ ಅರಸು ಅವರನ್ನು ಹೋಲಿಕೆ ಮಾಡಿಕೊಳ್ಳುತ್ತಿದ್ದರು. ದೇವರಾಜ ಅರಸು ಎಲ್ಲಿ, ನೀನು ಎಲ್ಲಿ. ದೇವರಾಜ ಅರಸು ಹಿಂದುಳಿದ ನಾಯಕರನ್ನು ಬೆಳೆಸಿದ್ದರು. ನೀವು ಯಾವ ನಾಯಕರನ್ನು ಬೆಳೆಸಿದ್ದೀರಿ. ಎಲ್ಲರನ್ನೂ ತುಳಿದಿದ್ದೀರಾ. ಪುಣ್ಯ, ಇಂದಿರಾ ಗಾಂಧಿ ಅವರಿಗೆ ಹೋಲಿಕೆ ಮಾಡಿಕೊಂಡಿಲ್ಲ. ಒಂದು ವೇಳೆ ಇಂದಿರಾ ಗಾಂಧಿಗೆ ಹೋಲಿಕೆ ಮಾಡಿಕೊಂಡಿದ್ದರೆ ಕಾಂಗ್ರೆಸ್‌ನವರೇ ಮಾತಾನಾಡುತ್ತಿದ್ದರು. ಇನ್ನೂ ಮುಂದೆ ಇಂದಿರಾ ಗಾಂಧಿ ಅವರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದೀನಿ ಎನ್ನಲಿ ಎಂದು ವ್ಯಂಗ್ಯವಾಡಿದರು.

ಯತೀಂದ್ರ ಹೇಳಿರುವುದಕ್ಕೆ ಅವರು ಕ್ಷಮೆ ಕೇಳಬೇಕು. ಹೋಲಿಕೆ ಮಾಡುವುದಾದರೆ ನಿಮ್ಮ ಕುಟುಂಬವನ್ನು ಹೋಲಿಕೆ ಮಾಡಿಕೊಳ್ಳಿ. ಕೆಆರ್‌ಎಸ್‌ನ ಒಂದು ಕಲ್ಲು ಕಟ್ಟುವ ಯೋಗ್ಯತೆ ನಿಮಗಿಲ್ಲ. ಇರುವ ಕಲ್ಲನ್ನು ಕೀಳಲು ಹೋಗುತ್ತಿದ್ದೀರಾ. ಪದೇ ಪದೇ ಮೈಸೂರು ಮನೆತನಕ್ಕೆ ದ್ರೋಹ ಬಗೆದಿರುವುದು ರಾಜ್ಯಕ್ಕೆ ಗೊತ್ತು. ಅಂತೆಯೇ ಮಗ ಹೋಗಳುವುದಲ್ಲ, ಜನರು ಹೋಗಳಬೇಕು. ರಾಜಮನೆತನದ ಕ್ಷಮೆ ಕೇಳದೇ ಇದ್ದರೆ ಜನರೆ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.

ಮೈಸೂರಿನಲ್ಲಿ ಡ್ರಗ್ಸ್ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಗೃಹ ಮಂತ್ರಿಗಳೇ ಇಲ್ಲ. ರಾಜ್ಯದಲ್ಲಿ ರೇಪ್, ಮರ್ಡರ್, ಟೆರರಿಸ್ಟ್ ಆಕ್ಟಿವಿಟಿ, ಹಿಂದುಗಳ ಮೇಲೆ ಹಲ್ಲೆ ಆಗುತ್ತಿದೆ. ರೈತರ ಸಾವು ಆಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ. ಇನ್ನೂ ಡ್ರಗ್ಸ್ ಬಗ್ಗೆ ಏನು ಮಾತನಾಡುವ ಹಾಗೇ ಇಲ್ಲ ಎಂದು ಟೀಕಿಸಿದರು.

ಚುನಾವಣಾ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಆರ್.ಅಶೋಕ್, ಕಾಂಗ್ರೆಸ್‌ಗೆ 136 ಸೀಟ್ ಬಂದಿದೆ. ಆದ್ದರಿಂದ ನನಗೂ ಅಕ್ರಮ ಎನಿಸುತ್ತಿದೆ. ಅವರ ಯೋಗ್ಯತೆಗೆ ಅಷ್ಟೊಂದು ಗೆಲ್ಲುವಂತೆ ಇಲ್ಲ. ಫ್ರೀ ಕಾರ್ಡು ಎಲ್ಲ ಹಂಚಿ ಮಾಡಿದಾರೆ. ಇವರು ಚುನಾವಣೆ ಅಕ್ರಮ ಮಾಡಿದಾರೆ ಎನ್ನಿಸುತ್ತದೆ. ಆಗಿದ್ದರೆ ಎಲೆಕ್ಷನ್ ಮಾಡಿ. ಕನಕಪುರ ಎಂದರೆ ಏನೆಂದು ಇಡೀ ರಾಜ್ಯಕ್ಕೆ ಗೊತ್ತು. ಅಲ್ಲಿ ಮತ ಹಾಕುವ ಹಕ್ಕನ್ನು ಕಸಿದುಕೊಳ್ಳುತ್ತಾರೆ. ಕನಕಪುರದಲ್ಲಿ ಎಂಪಿ ಚುನಾವಣೆಯಲ್ಲಿ ಅವ್ಯವಹಾರ ಆಗಿದೆ ಎಂದರೆ ಹೇಗೆ?. ರಾಹುಲ್ ಗಾಂಧಿ ಹೇಳಿದಾರೆ, ಸಾಕ್ಷಿ ಸಮೇತ ಕೊಡುತ್ತಾರಂತೆ. ಆದರೆ ಅವರ ಕೈಯಲ್ಲಿ ಬುರುಡೆನೂ ಕೊಡುವುದಕ್ಕೆ ಆಗಲ್ಲ. ಕನಕಪುರದಲ್ಲಿ ಇರುವ ಅಧಿಕಾರಿಗಳು ಸಿದ್ದರಾಮಯ್ಯ ಕಾಸು ತೆಗೆದುಕೊಂಡು ಹಾಕಿರುವವರು. ಅಕ್ರಮ ಆಗಿದ್ದರೆ ನೀವೇ ಅಕ್ರಮ ಮಾಡಿಸಿರುತ್ತೀರಾ. ತಪ್ಪಾಗಿದೆ ಎಂದರೆ ನೀವೇ ಕಳ್ಳರು. ನಿಮ್ಮ ಬಳಿ ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ. ಬಿಹಾರ ಚುನಾವಣೆ ಬಂದಿದೆ ಎಂದು ಹೀಗೆ ಹೇಳುತ್ತಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ 10 ಸೀಟು ಬರಲ್ಲ ಎಂದರು.

ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಇತರರಿದ್ದರು.

ಸುರ್ಜೇವಾಲ ಸುಪೀರಿಯರ್ ಸಿಎಂ

ಸುರ್ಜೇವಾಲ ಅಧಿಕಾರಿಗಳು, ಮಿನಿಸ್ಟರ್‌ಗಳು ಎಲ್ಲರ ಜತೆ ಸಭೆ ಮಾಡಿದ್ದಾರೆ. ಕರ್ನಾಟಕಕ್ಕೆ ಒಂದು ರೀತಿ ಸುರ್ಜೇವಾಲನೇ ಮುಖ್ಯಮಂತ್ರಿ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ಕಿತ್ತಾಡುತ್ತಿದ್ದಾರೆ. ಅದಕ್ಕೆ ಸುರ್ಜೇವಾಲ ಅಧಿಕಾರಿಗಳ ಸಭೆ ಮಾಡಿ ಸಿಎಂ ರೀತಿ ಆಕ್ಟಿಂಗ್ ಮಾಡುತ್ತಿದ್ದಾರೆ. ಸುರ್ಜೇವಾಲ ಸುಪೀರಿಯರ್ ಸಿಎಂ. ಇಬ್ಬರ ಕುರ್ಚಿ ಕಿತ್ತಾಟದಲ್ಲಿ ದುಡ್ಡು ಕಲೆಕ್ಟ್ ಮಾಡಿಕೊಂಡು ಸುಖವಾಗಿ ನೆಮ್ಮದಿಯಾಗಿ ಇದ್ದಾರೆ ಎಂದು ಆರ್.ಅಶೋಕ್ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net