ಮಂಡ್ಯದ ಜನರು ಮಣ್ಣಿನ ಮಕ್ಕಳು: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ

R Ashok criticism against Congress Mandya
Published on

ಮಂಡ್ಯ: ಮಂಡ್ಯ ಜನರು ಛತ್ರಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸುತ್ತಾರೆ. ಮಂಡ್ಯ ಜನರು ಚಕ್ರವರ್ತಿಗಳು, ಮಣ್ಣಿನ ಮಕ್ಕಳು ಎಂಬುದನ್ನು ಅವರಿಗೆ ತಿಳಿಸಿಕೊಡಿ. ಕಳ್ಳಮಳ್ಳರು ಜನರಿಗೆ ದ್ರೋಹ ಮಾಡಿದ್ದಾರೆ. ಸೊಳ್ಳೆತಿಗಣೆಯಂತೆ ಜನರ ರಕ್ತ ಹೀರುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ನಗರದಲ್ಲಿ ಸರ್‌ಎಂವಿ ಪ್ರತಿಮೆಯಿಂದ ಜಯಚಾಮರಾಜೇಂದ ಒಡೆಯರ್ ವೃತ್ತದವರೆಗೆ ಆಯೋಜಿಸಿದ್ದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಸರ್ವರಿಗೂ ಸಮಪಾಲು ಸಮಬಾಳು ಎಂದರು. ಆದರೆ, ಸಿದ್ದರಾಮಯ್ಯ ಎಲ್ಲವೂ ಮುಸ್ಲಿಮರ ಪಾಲು ಎನ್ನುತ್ತಿದ್ದಾರೆ. ಹಾಲು, ವಿದ್ಯುತ್, ಡಿಸೇಲ್ ಮತ್ತು ಮುಡಾದಲ್ಲಿ ಲೂಟಿ ಮಾಡಿದವರು ಯಾರು ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. ಆಗ ಲೂಟಪ್ಪ ಲೂಟಪ್ಪ, ಸಿದ್ದರಾಮಯ್ಯ ಲೂಟಪ್ಪ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಿಟ್ಟ ಕಾಂಗ್ರೆಸ್ ಸರ್ಕಾರದವರು ರಾಜ್ಯಕ್ಕೆ ಮಾರಿಯಾಗಿ, ತಮಿಳುನಾಡಿಗೆ ಉಪಕಾರಿಯಾಗಿದ್ದಾರೆ. ಡಿಎಂಕೆ ಜತೆ ದೋಸ್ತಿ ಉಳಿಸಿಕೊಳ್ಳಲು ನೀರು ಬಿಟ್ಟಿದ್ದಾರೆ. ಆದರೆ, ಮಂಡ್ಯ ಜಿಲ್ಲೆಯ ನಾಲೆಯ ಕೊನೇ ಭಾಗದ ರೈತರಿಗೆ ನೀರೇ ತಲುಪುತ್ತಿಲ್ಲ ಎಂದು ಟೀಕಿಸಿದರು. ಮೋದಿ ಇಲ್ಲದಿದ್ದರೆ ದೇಶ ಉಳಿಯುತ್ತಿತ್ತಾ?. ಪುಂಡರು ಹನುಮ ಧ್ವಜ ಕಿತ್ತಾಕಿದಂತೆ ಹಣೆಯ ಮೇಲಿನ ಕುಂಕುಮವನ್ನೂ ಅಳಿಸಿ ಹಾಕುತ್ತಿದ್ದರು. ನಾಗಮಂಗಲ ಮತ್ತು ಉದಯಗಿರಿ ಗಲಭೆಗಳಲ್ಲಿ ಕಲ್ಲು ಎಸೆದವರನ್ನು ಹೆಡೆಮುರಿ ಕಟ್ಟದೆ, ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಕಲ್ಲು ಹೊಡೆದವರ ಮೇಲೆ ಬುಲ್ಡೋಜರ್ ಹತ್ತಿಸಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲು, ವಿದ್ಯುತ್, ಪೆಟ್ರೋಲ್ ಸೇರಿದಂತೆ 50ಕ್ಕೂ ಹೆಚ್ಚಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಹಣವನ್ನು ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಲೂಟಿ ಮಾಡುವಲ್ಲಿ ಚಂಬಲ್ ಕಣಿವೆ ದರೋಡೆಕೋರರನ್ನೂ ಮೀರಿಸಿದ್ದಾರೆ. ಮೈಸೂರು ಮಹಾರಾಜರಿಗಿಂತ ಸಿದ್ದರಾಮಯ್ಯ ದೊಡ್ಡವರು ಎಂದು ಹೇಳಿಕೊಳ್ಳುತ್ತಾರೆ. ಮಹಾರಾಜರು ತಮ್ಮ ಪತ್ನಿ ಒಡವೆಗಳನ್ನು ಒತ್ತೆ ಇಟ್ಟು ಕೆಆರ್‌ಎಸ್ ಅಣೆಕಟ್ಟೆ ಕಟ್ಟಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ತಮ್ಮ ಪತ್ನಿ ಹೆಸರಿನಲ್ಲಿ 14 ಮುಡಾ ನಿವೇಶನಗಳನ್ನು ಹೊಡೆದುಕೊಂದರು. ಮಹಾರಾಜರ ವಂಶಸ್ಥರಿಗೆ ನಿರಂತರ ಕಿರುಕುಳ ಕೊಡುತ್ತಿದ್ದಾರೆ. ಇವರನ್ನು ದೇವರು ಮೆಚ್ಚುತ್ತಾನಾ?. ಆಸ್ತಿ ಲೂಟಿ ಮಾಡಿದವರು ಮಹಾರಾಜರ ಸಮಾನರಾಗುತ್ತಾರಾ ಎಂದು ಪ್ರಶ್ನಿಸಿದರು.

ಮತೀಯ ಆಧಾರದ ಮೀಸಲಾತಿಗೆ ಅಂಬೇಡ್ಕರ್ ಅಂದೇ ವಿರೋಧ ವ್ಯಕ್ತಪಡಿಸಿದ್ದರು. ಮಾತೆತ್ತಿದರೆ, ಅಂಬೇಡ್ಕರ್, ಸಂವಿಧಾನ ಎಂದು ಮಾತನಾಡುವ ಕಾಂಗ್ರೆಸ್ ನಾಯಕರು, ಗುತ್ತಿಗೆಯಲ್ಲಿ ಶೇ.4ರಷ್ಟು ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಮುಸ್ಲಿಮರಿಗೆ ಕೋಟಿ, ಹಿಂದುಗಳಿಗೆ ಟೋಪಿ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ, ಬಿಜೆಪಿ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿಲ್ಲ. ಜನರ ಜತೆ ಚೆಲ್ಲಾಟವಾಡುತ್ತಿರುವವರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ರಾಜ್ಯಸರ್ಕಾರದ ಲೂಟಿ ಬಗ್ಗೆ ಜನರಿಗೆ ತಿಳಿಸಲು ನಾವು ಮುಂದಾಗಿದ್ದೇವೆ. ಸರ್ಕಾರದ ವಿರುದ್ದ ಆಕ್ರೋಶ ಇಲ್ಲದಿದ್ದರೇ ಇಷ್ಟು ಜನರ ಸೇರುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ನನಗೆ ಗೊತ್ತಿಲ್ಲದಷ್ಟು ತೆರಿಗೆಯನ್ನು ಹಾಕಿದ್ದಾರೆ. ವಿದ್ಯುತ್, ಹಾಲು ಸೇರಿ 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ್ದಾರೆ. ನಾವು ಸಕಾಲ ಯೋಜನೆ ತಂದಿದ್ದೆವು. ಆದರೆ ಈ ಸರ್ಕಾರ ಡೆತ್ ಸರ್ಟಿಫಿಕೇಟ್ ದರವನ್ನ ಏರಿಕೆ ಮಾಡಿದ್ದಾರೆ. ಎಲ್ಲದ್ದಕ್ಕೂ ಕೈ ಸರ್ಕಾರದಲ್ಲಿ ಲಂಚ ಲಂಚ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಮೇಲೆ ಶೇ.40ರಷ್ಟು ಲಂಚ ಆರೋಪ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಶೇ.80ರಷ್ಟು ಲಂಚ ಇದೆ. ಯಾವುದೇ ಇಲಾಖೆಗೆ ಅರ್ಜಿ ಹಾಕಿದರೂ ಅದರ ಜತೆ ನೋಟು ಕೊಡಬೇಕು. ಕೆಲ ರಾಜ್ಯಗಳನ್ನ ಗೂಂಡಾ ರಾಜ್ಯ, ಲೂಟಿ ಸರ್ಕಾರ ಎನ್ನುತ್ತಿದ್ದರು. ಆದರೆ ಆ ಎಲ್ಲ ಪ್ರಶಸ್ತಿಯನ್ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬ್ಯಾಂಕ್ ದರೋಡೆ, ಸರಗಳ್ಳತನ ಮಿತಿ ಮೀರಿದೆ. ಗೃಹ ಸಚಿವರು ದೊಡ್ಡ ನಗರದಲ್ಲಿ ಇದೆಲ್ಲ ಮಾಮೂಲು ಎನ್ನುತ್ತಾರೆ. ಜನರು ಓಡಾಡೋದು ಕಷ್ಟವಾಗಿದೆ. ಹಸುವಿನ ಕೆಚ್ಚಲು ಕೂಯ್ದವರಿಗೆ ಈ ಸರ್ಕಾರ ರಕ್ಷಣೆ ಕೊಡುವ ಕೆಲಸ ಮಾಡುತ್ತಿದೆ. ಈ ಭ್ರಷ್ಟ ಸರ್ಕಾರಕ್ಕೆ ಇತಿಶ್ರೀ ಹಾಡೋಣಾ ಎಂದು ಕರೆ ನೀಡಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್‌ನಾರಾಯಣ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕಾಗಿ ಅಂಗಲಾಚಿದರು. ಗ್ಯಾರಂಟಿ ಕೊಡುತ್ತೇವೆ, ಪೆನ್ನು, ಪೇಪರ್ ಕೊಡಿ ಎಂದರು. ಆದರೆ ಈಗ ಕಾಂಗ್ರೆಸ್ ಏನು ಮಾಡುತ್ತಿದೆ. ಜನರಿಗೆ ಶಕ್ತಿ ನೀಡುವುದನ್ನ ಮರೆತು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯಾವುದೇ ಕೆಲಸ ಆಗಬೇಕು ಎಂದರೂ ಹಣ ಕೇಳುತ್ತಾರೆ. ಉದ್ಯೋಗ ಸೃಷ್ಟಿಸುವುದು ಇರಲಿ, ಇರುವ ಕೈಗಾರಿಕೆ ಉಳಿಸುವುದೇ ಹೆಚ್ಚಾಗಿದೆ. ಹಾಲಿನ ದರ ಏರಿಕೆ ಮಾಡಿರುವುದ ರೈತರಿಗೆ ಎನ್ನುತ್ತಾರೆ. ಆದರೆ ರೈತರಿಗೆ ಆ ಹಣ ಕೊಡ್ತಿದ್ದಾರಾ, ಇಲ್ಲ. ಮಂಡ್ಯ ಜಿಲ್ಲೆಯಲ್ಲಿ 6 ಜನ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಆದರೂ ಮೈಷುಗರ್ ಕಾರ್ಖಾನೆ ಅಭಿವೃದ್ದಿ ಹಣ ಬಿಡುಗಡೆ ಮಾಡಲಿಲ್ಲ. ಮಂಡ್ಯ ವಿವಿಯನ್ನೂ ಹಿಂಪಡೆಯಲು ಮುಂದಾಗಿದ್ದಾರೆ ಎಂದು ದೂರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ಮುರುಗೇಶ ನಿರಾಣಿ, ಕೆ.ಸಿ.ನಾರಾಯಣಗೌಡ, ಮಾಜಿ ಸಂಸದೆ ಸುಮಲತಾ, ಇಂಡುವಾಳು ಸಚ್ಚಿದಾನಂದ, ಡಾ.ಸಿದ್ದರಾಮಯ್ಯ, ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ, ಇಂದ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net