

ಮಂಡ್ಯ: ಕೇಂದ್ರ ಗೃಹಸಚಿವ ಅಮಿತ್ ಷಾ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಧಮ್ಮು, ತಾಕತ್ತಿದ್ದರೆ ಡಿಕೆಶಿಯನ್ನು ಪಕ್ಷದಿಂದ ಸಸ್ಪೆಂಡ್ ಮಾಡಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಬೇರೆ ಕಾಂಗ್ರೆಸ್ ನಾಯಕರಂತಲ್ಲ. ಬದಲಿಗೆ ಒದ್ದು ಕಿತ್ತುಕೊಳ್ಳುವ ಜಾಯಾಮಾನ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋಗಬೇಡಿ ಎಂದಿದ್ದರು. ಆದರೂ ಡಿಕೆಶಿ ಕುಂಭಮೇಳಕ್ಕೆ ಹೋದರು. ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನ ಹೋಗಿ ಭೇಟಿ ಮಾಡಿದ್ದರು. ಒಬ್ಬ ಸಿಎಂ, ಪ್ರಧಾನಿ ಭೇಟಿ ಮಾಡುವುದು ಕಷ್ಟ. ಅಂತಹದರಲ್ಲಿ ಒಬ್ಬ ಸಚಿವರು, ಪಿಎಂ ಮಾಡುತ್ತಾರೆಂದರೆ ಏನರ್ಥ ಎಂದು ಪ್ರಶ್ನಿಸಿದರು.
ಕುಂಭಮೇಳ ವಿಚಾರವಾಗಿ ಕಾಂಗ್ರೆಸ್ ನಾಯಕರು ಟೀಕೆಯನ್ನ ಮಾಡಿದ್ದರು. ಆದರೆ ಯುಪಿ ಸಿಎಂ ಅವರನ್ನು ಡಿಕೆಶಿ ಹಾಡಿ ಹೊಗಳಿದರು. ಈಗ ಈಶಾ ಫೌಂಡೇಶನ್‌ಗೆ ಹೋಗಿ ಅಮಿತ್ ಷಾ ಅವರ ಜತೆ ಕುಳಿತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ನಾಯಕರು ಕಾಮೆಂಟ್ ಮಾಡುತ್ತಾರೆ. ಹಾಗಿದ್ದರೆ ನಿಮಗೆ ಧಮ್ಮು, ತಾಕತ್ತಿದ್ದರೆ ಡಿಕೆಶಿಯನ್ನು ಸಸ್ಪೆಂಡ್ ಮಾಡಿ. ಡಿಕೆಶಿ ಬಿಜೆಪಿ ಪಕ್ಷಕ್ಕೆ ಬರುವ ವಿಚಾರವಾಗಿ ಚರ್ಚೆಯಾಗಿಲ್ಲ. ಮೊದಲು ಸಸ್ಪೆಂಡ್ ಮಾಡಲಿ, ಮುಂದೆ ನೋಡೋಣಾ. ನಾವ್ಯಾರು ಡಿಕೆಶಿಯನ್ನು ಪಕ್ಷಕ್ಕೆ ಕರೆದಿಲ್ಲ. ಕೇಂದ್ರದ ನಾಯಕರೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.