ವಕ್ಫ್‌ನಿಂದ ರೈತರ ಆಸ್ತಿ ಕಬಳಿಕೆ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ

R.Ashok criticism against Congress Mandya
Published on

ಮಂಡ್ಯ: ವಕ್ಫ್ ಬೋರ್ಡ್‌ನವರು ಟಿಪ್ಪು ಸುಲ್ತಾನ್ ಕಾಲದ ಪತ್ರ ಇಟ್ಟುಕೊಂಡು ದೇವಾಲಯ ಮತ್ತು ರೈತರ ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾರೆ. ಮೈಷುಗರ್ ಆಸ್ತಿಯನ್ನು ವಕ್ಫ್ ಬೋರ್ಡ್ ಎಂದು ಬರೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದರು.

ಮಂಡ್ಯ ತಾಲೂಕು ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ತಗ್ಗಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಪಕ್ಷ ಸೇರ್ಪಡೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಸರ್ಕಾರ ಗ್ರಾಮೀಣ ಭಾಗದಲ್ಲಿಯೂ ತೆರಿಗೆ ಕಟ್ಟುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನಮ್ಮ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಡವರ ಮೇಲೆ ತೆರಿಗೆ ಹಾಕಿಲ್ಲ. ಬೇಕಿದ್ದರೆ ಸಾಕ್ಷ್ಯ ಕೊಡಲಿ. ಅದೇ ಸಿದ್ದರಾಮಯ್ಯ ಅವರು 1 ಲಕ್ಷ ಕೋಟಿ ರೂ ಸಾಲ ಮಾಡ್ತಿದ್ದಾರೆ. ಈ ಸಾಲ ನಿಮ್ಮ ತಲೆಯ ಮೇಲೆ ಬರುತ್ತದೆ. ಮತ್ತಷ್ಟು ತೆರಿಗೆ ನಿಮ್ಮ ಮೇಲೆ ಹಾಕುತ್ತಾರೆ. ಕ್ವಾಟರ್ ಹೊಡೆದರೆ ಕಿಕ್ ಬರುತ್ತಿತ್ತು, ಈಗ ಕ್ವಾಟರ್ ಬೆಲೆ ನೋಡಿದರೆ ಸಾಕು ಕಿಕ್ ಬರುತ್ತೆ ಎಂದು ವ್ಯಂಗ್ಯವಾಡಿದರು.

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಒಡವೆ ಅಡವಿಟ್ಟು ಕೆಆರ್‌ಎಸ್ ಅಣೆಕಟ್ಟೆ ಕಟ್ಟಿಸಿದರು. ಮಂಡ್ಯ, ಮೈಸೂರು, ಬೆಂಗಳೂರಿನ ಜನರಿಗೆ ನೀರು ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅಣೆಕಟ್ಟೆ ಕಟ್ಟಿಸಿದರೆ ಅದು ನಾಳೆಗೆ ಬಿದ್ದೋಗುತ್ತದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಲ್ಲಾಡಿಕೊಂಡು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಈಗ ಏನಾಯ್ತು ಅದು. ಒಟ್ಟಿನಲ್ಲಿ ಮೇಕೆ ತಲೆನೇ ಕೋಯ್ದು ತಿಂದು ಹಾಕಿದ್ದೀರಿ ಎಂದರು.

ಮಾಜಿ ಸಚಿವ ಭೈರತಿ ಬಸವರಾಜ ಮಾತನಾಡಿ, ಮಂಡ್ಯ ಜಿಲ್ಲೆಯ ಪ್ರತಿ ಗ್ರಾಮಗಳಿಗೂ ನಾನು ಬಂದು ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಶ್ರೀರಂಗಪಟ್ಟಣ ಜನರಲ್ಲಿ ಕಳಕಳಿಯಾಗಿ ಬೇಡಿಕೊಳ್ಳುತ್ತೇನೆ. ನಿಮ್ಮ ಮನೆ ಮಗ ಇಂಡುವಾಳು ಸಚ್ಚಿದಾನಂದ ಅವರಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಮಾತನಾಡಿ, ವಿಧಾನಸಭಾ ಚುನಾವಣೆಗೆ ಇನ್ನೂ ಮೂರೂವರೆ ವರ್ಷವಿದೆ. ಕಳೆದ ಬಾರಿ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ್ದಾರೆ. ಅದು ಸೋಲಲ್ಲ. ಮತ್ತಷ್ಟು ಪಕ್ಷ ಸಂಘಟನೆಗಾಗಿ ಜನರ ಬಳಿ ಹೋಗುತ್ತೇನೆ. ಬಡ ರೈತನಿಗೆ ಟಿಕೆಟ್ ಕೊಟ್ಟ ಬಿಜೆಪಿಗೆ ಎಂದೂ ಮೋಸ ಮಾಡುವುದಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೈಸೂರು- ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭಿನಂದಿಸಲಾಯಿತು. ಕೋಲಾರ ಮಾಜಿ ಸಂಸದ ಮುನಿಸ್ವಾಮಿ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ತಾಲೂಕು ಘಟಕದ ಅಧ್ಯಕ್ಷ ಪೀ.ಹಳ್ಳಿ ರಮೇಶ್, ಮುಖಂಡರಾದ ಟಿ.ಶ್ರೀಧರ್, ಶಿವಲಿಂಗೇಗೌಡ, ಅಶೋಕ್‌ಕುಮಾರ್, ಮಂಗಳಾ ಇದ್ದರು. ಇದೇ ವೇಳೆ ವಿವಿಧ ಪಕ್ಷವನ್ನು ತೊರದ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.

ಯಾವ ಪರಿಣಾಮವೂ ಬೀರಲ್ಲ

ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಸೋಲು ಯಾವ ಪರಿಣಾಮವೂ ಬೀರಲ್ಲ. ಇದು ಜನರ ತೀರ್ಮಾನ ಆಗಿರುವುದರಿಂದ ಸ್ವೀಕರಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸುಮಾರು 150ಕ್ಕೂ ಹೆಚ್ಚು ಯುವಕರು ಸೇರ್ಪಡೆಯಾಗಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶಕ್ತಿ ಬಂದಂತಾಗಿದೆ. ದೇಶದಲ್ಲಿ ಇಂತಹ ಬೆಳೆವಣಿಗೆ ಪ್ರತಿ ಗ್ರಾಮದಿಂದಲೂ ಹೆಚ್ಚು ಆಗಬೇಕು. ಮುಂದಿನ 2-3 ವರ್ಷದಲ್ಲಿ ವಿಸ್ಮಯ ಭಾರತದ ಕಲ್ಪನೆ ಸಾಕಾರಗೊಳ್ಳಲಿದೆ. ಬಡವರ ಪರವಾಗಿರುವ ಪ್ರಧಾನ ಮಂತ್ರಿ ಅವರ ಜತೆಗೆ ಎಲ್ಲರೂ ನಿಲ್ಲಬೇಕು ಎಂದರು.

ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯನ್ನ ಸದನದಲ್ಲಿ ಮಂಡಿಸಿ ಜಾರಿಗೆ ತರಲಿದೆ. ರೈತರು ಭಯ ಪಡುವುದು ಬೇಡ, ನಮ್ಮ ಕರ್ನಾಟಕದಲ್ಲಿ ವಕ್ಫ್ ಉಪಟಳ ಹೆಚ್ಚಿದೆ. ಸರ್‌ಎಂ.ವಿಶ್ವೇಶ್ವರಯ್ಯ ಅವರು ಓದಿದ ಶಾಲೆಯನ್ನೇ ವಕ್ಫ್ ನನ್ನದೆಂದು ಹೇಳುತ್ತಿದೆ. ಇದು ಅಪಾಯಕಾರಿ ಇಂತಹದ್ದನ್ನು ಪ್ರತಿಯೊಬ್ಬರೂ ವಿರೋಧಿಸಬೇಕು. ಮೈಸೂರು ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರ ತರಲು ಹೊರಟ ಸರ್ಕಾರದ ನಡೆಯನ್ನ ವಿರೋಧಿಸಿದ್ದೇವೆ. ರಾಜ ಮಹಾರಾಜರ ಕಾಲದಲ್ಲಿ ಜಮೀನನ್ನು ದಾನ ಮಾಡಲಾಗಿದೆ. ಅಂತಹ ಜಮೀನನ್ನು ವಕ್ಫ್ ನನ್ನದೆಂದು ಹೇಳುತ್ತಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಹಿಂದು ಧರ್ಮದ ವಿರುದ್ಧ ಬಂದರೆ ಸುಮ್ಮನೆ ಕೂರಲು ಆಗುವುದಿಲ್ಲ ಎಂಬುದನ್ನು ಸ್ವಾಮಿ ವಿವೇಕಾನಂದ ಅವರು ಅಂದೇ ಎಚ್ಚರಿಕೆ ನೀಡಿದ್ದಾರೆ ಅದನ್ನು ಪಾಲಿಸೋಣ ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net