

ಮಂಡ್ಯ: ನನ್ನ ಬಳಿ ಅಂಕಿ-ಅಂಶ ಇದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ತೀರಾ ಜಾಸ್ತಿ ಆಗ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಪರಾಧ ಪ್ರಕರಣಗಳನ್ನು ದಮನ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನೋಡಿದ್ರಲ್ಲ, ಆರೋಪಿಗಳನ್ನು ಕೇವಲ 80 ಗಂಟೆಗಳಲ್ಲಿ ಹೆಡೆಮುರಿ ಕಟ್ಟಿ ತಂದರು. ಈ ರೀತಿ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ.
ಅಲ್ಲಿ ಇಲ್ಲಿ ಸಣ್ಣ ಪುಟ್ಟ ಲೋಪ ಇರಬಹುದು. ಬೆರಳೆಣಿಕೆಯಷ್ಟು ಲೋಪ ಕಂಡುಬಂದ್ರೆ ಸ್ವಲ್ಪ ಕ್ಷಮೆ ಕೊಡಬೇಕಾಗುತ್ತದೆ. ಪೊಲೀಸರ ಒಳ್ಳೆಯ ಕೆಲಸದಿಂದ ನಾವು ನೆಮ್ಮದಿಯಾಗಿದ್ದೇವೆ ಎಂದು ಪೊಲೀಸರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಬಿಜೆಪಿ ಕೊಲೆಗಡುಕ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಸಿದ್ದರಾಮಯ್ಯನವರು ಏನು ಬೇಕಾದರೂ ಮಾತಾಡಬಹುದು. ನಮಗೆ ಅವರ ಮೇಲೆ ಗೌರವವಿದೆ. ಅವರು ಹಿರಿಯರು. ಸಿಎಂ ಆಗಿದ್ದವರು. ಬಹಳ ವರ್ಷಗಳ ಅವರ ಸಾರ್ವಜನಿಕ ಜೀವನ ನೋಡಿದವರು ನಾವು. ಅವರು ಈ ರೀತಿ ಮಾತಾಡ್ತಾರೆ ಅಂದ್ರೆ ನಾನು ಕಿರಿಯವ. ಅವರಿಗೆ ನಾನು ಏನು ಪಾಠ ಹೇಳೋದು ಹೇಳಿ? ಜನ ಯೋಚನೆ ಮಾಡ್ತಿದ್ದಾರೆ. ಅವರು ಬಳಸುವ ಶಬ್ಧಗಳು, ಬಾಡಿ ಲಾಂಗ್ವೇಜ್ ಎಲ್ಲವನ್ನೂ ಗಮನಿಸ್ತಿದ್ದಾರೆ. ಆ ಬಗ್ಗೆ ನಾನು ಟೀಕೆ ಮಾಡೋಲ್ಲ ಎಂದರು.