ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್

carona logo
Published on

ಉಡುಪಿ: ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡುವ ಷರತ್ತಿನೊಂದಿಗೆ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಗೆ ಅಂತರ್ ಜಿಲ್ಲೆ, ರಾಜ್ಯದಿಂದ ಜನರನ್ನು ಕರೆತರುವ ಮತ್ತು ಕಳುಹಿಸಿ ಕೊಡುವ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸುವವರೆಗೂ ಗಡಿಯಲ್ಲಿ ಹೊರ ರಾಜ್ಯದ ಯಾವುದೇ ವಾಹನಗಳಿಗೆ ಪ್ರವೇಶ ನೀಡದಂತೆ ಜಿ.ಜಗದೀಶ್ ಸೂಚಿಸಿದರು. ವಿವಿಧ ಹಾಸ್ಟೆಲ್ ಮತ್ತು ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು. ಹೋಟೆಲ್ ಕ್ವಾರಂಟೈನ್ ವೆಚ್ಚವನ್ನು ಸ್ವತಃ ಭರಿಸಬೇಕು. ಹಾಸ್ಟೆಲ್‌ಗಳು ಮತ್ತು ಹೋಟೆಲ್‌ಗಳನ್ನು ಗುರುತಿಸುವಂತೆ ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಹೊರರಾಜ್ಯದಿಂದ ಬರುವ ಕನಿಷ್ಠ 25 ಜನರನ್ನು ಕ್ವಾರಂಟೈನ್ ಮಾಡಲು ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಹೊರರಾಜ್ಯಕ್ಕೆ ತೆರಳುವವರಿಗೂ ಪರೀಕ್ಷೆ: ಹೊರರಾಜ್ಯಗಳಿಗೆ ತೆರಳಬೇಕಾದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಬೀಡಿನಗುಡ್ಡೆ ಮೈದಾನದಲ್ಲಿ ಪರೀಕ್ಷಿಸಿ, ಅನುಮತಿ ಬಂದ ನಂತರ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಅಂತರ್ ಜಿಲ್ಲಾ ಪ್ರವಾಸಕ್ಕೆ ಅನುಮತಿ ಇಲ್ಲ. ವೈದ್ಯಕೀಯ ಕಾರಣ ಹೊರತುಪಡಿಸಿ ಇತರೆ ಕಾರಣಕ್ಕೆ ಪಾಸ್‌ಗಳನ್ನು ನೀಡುವುದಿಲ್ಲ. ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರನ್ನು ಭಾನುವಾರ ರಾತ್ರಿಯೊಳಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಗಳಿಗೆ ಸೂಚಿಸಿದರು.

ಮಧ್ಯಾಹ್ನವರೆಗೆ ತೆರೆದಿರುತ್ತದೆ ಅಂಗಡಿ: ಪ್ರಸ್ತುತ ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟು ಚಟುವಟಿಕೆ ಬೆಳಗ್ಗೆ 7ರಿಂದ 11 ಗಂಟೆವರೆಗೆ ಇದ್ದು, ಮೇ 3ರ ಬಳಿಕ ಮಧ್ಯಾಹ್ನ 1 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಡಿಸಿ ಜಗದೀಶ್ ತಿಳಿಸಿದ್ದಾರೆ. ಸಾಯಂಕಾಲ 5 ರಿಂದ 7ರ ವರೆಗೆ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು ಮನೆಗೆ ತೆರಳಲು ಅವಕಾಶ ನೀಡಲಾಗುವುದು. ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ವೈನ್‌ಶಾಪ್, ಎಂಎಸ್‌ಐಎಲ್ ಮದ್ಯದಂಗಡಿ, ಹೋಟೆಲ್ ಪಾರ್ಸೆಲ್ ಸೇವೆ, ಮಲ್ಟಿ ಬ್ರಾಂಡ್ ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳು (ಬಟ್ಟೆ ಮಳಿಗೆ ಸಹಿತ), ಮೊಬೈಲ್ ರೀಚಾರ್ಜ್, ಇಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ಪೇಂಟ್ ಅಂಗಡಿಗಳು, ಛಾಯಾಪ್ರತಿ ಅಂಗಡಿ, ಕಟ್ಟಡ ನಿರ್ಮಾಣ ಕಾಮಗಾರಿಗೆ ಪೂರಕವಾದ ಕಚ್ಚಾವಸ್ತು, ಟೈರ್ ಅಂಗಡಿ, ಪಂಚರ್ ಶಾಪ್, ಚಪ್ಪಲಿ ಅಂಗಡಿ, ಫ್ಯಾನ್ಸಿ, ಪಾತ್ರೆ ಮಾರಾಟ ಸೇರಿದಂತೆ ಮತ್ತಿತರ ಅಂಗಡಿಗಳು ತೆರೆದಿರುತ್ತದೆ. ಸಲೂನ್, ಸ್ಪಾ ಇನ್ನೂ ಒಂದು ವಾರ ತೆರೆಯಲು ಅವಕಾಶವಿಲ್ಲ ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net