ಕಾಸರಗೋಡಿನ ಒಂದೇ ಕುಟುಂಬ ವಿನಿಮಯ ಮಾಡುತ್ತಿದ್ದ ಖೋಟಾ ನೋಟು ಜಾಲ ಬಯಲು

NOTE
Published on

ಬಂಟ್ವಾಳ: ಖೋಟಾ ನೋಟು ವಿನಿಮಯ ಮಾಡುತ್ತಿದ್ದ ಜಾಲವೊಂದನ್ನು ಬಂಟ್ವಾಳ ನಗರ ಪೊಲೀಸರು ಭೇದಿಸಿದ್ದು ಕೇರಳ ಮೂಲದ ಆರೋಪಿಗಳಿಬ್ಬರನ್ನು ಶುಕ್ರವಾರ ರಾತ್ರಿ ಬಿ.ಸಿ.ರೋಡಿನಲ್ಲಿ ಬಂಧಿಸಿದ್ದಾರೆ. ಕಾಸರಗೋಡಿನ ಚೂರಿ ಕೂಡ್ಲು ಗ್ರಾಮದ ಮೊಹಮ್ಮದ್ ಸಿ.ಎ.(61), ಕಮರುನ್ನೀಸಾ(41) ಅವರನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿ ಶರೀಫ್ ಪರಾರಿಯಾಗಿದ್ದಾನೆ.

ಬಂಧಿತರಿಂದ 500 ರೂ. ಮುಖಬೆಲೆಯ 46 ಖೋಟಾ ನೋಟುಗಳು, 5300 ರೂ. ನಗದು ಹಾಗೂ 3 ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಒಂದೇ ಕುಟುಂಬದ ಮೂವರು ಆರೋಪಿಗಳು ಕಾರಿನಲ್ಲಿ ಶುಕ್ರವಾರ ಬಂಟ್ವಾಳದ ತುಂಬೆಗೆ ಬಂದು ಅಲ್ಲಿನ ಅಂಗಡಿಯಲ್ಲಿ ವ್ಯವಹಾರ ನಡೆಸಿ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಬಿ.ಸಿ.ರೋಡಿಗೆ ಬಂದು ಇಲ್ಲಿನ ಅಂಗಡಿಗಳಲ್ಲಿ ವ್ಯವಹಾರ ನಡೆಸಿ ಖೋಟಾ ನೋಟುಗಳನ್ನು ನೀಡಿದ್ದಾರೆ. ಈ ವೇಳೆ ಅಂಗಡಿಯವರಿಗೆ ಸಂಶಯ ಬಂದು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಂಡ, ಹೆಂಡತಿ ಹಾಗೂ ಸಂಬಂಧಿ ಸೇರಿಕೊಂಡು ಖೋಟಾ ನೋಟು ಚಲಾವಣೆಯ ದಂಧೆಯಲ್ಲಿದ್ದಾರೆ. ಅಂಗಡಿಗಳಲ್ಲಿ ಖೋಟಾ ನೋಟು ನೀಡಿ ಚಿಲ್ಲರೆ ಪಡೆದುಕೊಂಡು ಮರೆಯಾಗುತ್ತಿದ್ದರು. ಇವರು ಖರೀದಿಸಿದ ವಸ್ತುಗಳನ್ನು ಕಾಸರಗೋಡುವಿನಲ್ಲಿರುವ ಇವರ ಅಂಗಡಿಯಲ್ಲಿ ಮಾರಾಟಕ್ಕೆ ಉಪಯೋಗಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net