ಕನ್ನಡ ಸಾಹಿತ್ಯ ಪ್ರಜ್ಞೆ ಬೆಳೆಯಲಿ: ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಕರೆ

Quiz competition test Mandya
Published on

ಮಂಡ್ಯ: ಎಲ್ಲರಲ್ಲೂ ಕನ್ನಡ ಸಾಹಿತ್ಯ ಪ್ರಜ್ಞೆ ಬೆಳೆಯಬೇಕೆಂಬುದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಕಲ್ಲುಕಟ್ಟಡ)ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಚಾರ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಮತ್ತು ವಿಶೇಷವಾಗಿ ಜಿಲ್ಲಾ ಸಾಹಿತ್ಯ ಇತಿಹಾಸ ವೈಶಿಷ್ಟ್ಯ ಕುರಿತ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಜಿಲ್ಲಾದ್ಯಂತ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆಯು ಏಕಕಾಲದಲ್ಲಿ ನಡೆಯುತ್ತಿದೆ. ಇದರಲ್ಲಿ ಜಿಲ್ಲೆಯಲ್ಲಿ ಸುಮಾರು 157 ಪದವಿ ಪೂರ್ವ ಕಾಲೇಜಿಗಳಿದ್ದು, ಅದರಲ್ಲಿ ಸುಮಾರು 28 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಕಾಲೇಜು, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಆಯ್ಕೆಗೊಂಡ ವಿಜೇತ ಮಕ್ಕಳಿಗೆ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ಹೇಳಿದರು.

1974ರಲ್ಲಿ ಮಂಡ್ಯದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆದಿತ್ತು. ಎರಡನೇ ಬಾರಿಗೆ 1994ರಲ್ಲಿ ಆಯೋಜಿಸಲಾಗಿತ್ತು. ಇದೀಗ 3ನೇ ಬಾರಿಗೆ ಅಂದರೆ 30 ವರ್ಷದ ನಂತರ ನಡೆಯುತ್ತಿದ್ದು, ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುವ ಉದ್ದೇಶವೆಂದರೆ ಕನ್ನಡ ಪ್ರಜ್ಞೆ, ಕನ್ನಡ ಪ್ರೇಮ ಬರಲೆಂದು ಹಾಗೂ ಕನ್ನಡ ಅಭಿಮಾನದ ಭಾವ ಮೂಡಲಿ ಎಂಬುದಾಗಿದೆ. ಕನ್ನಡ ಶಾಸ್ತ್ರೀಯ ಭಾಷೆಯಾಗಿದ್ದು, 2 ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. 3 ಪರಿಪೂರ್ಣ ಭಾಷೆಗಳಲ್ಲಿ ಕನ್ನಡವು ಸಹ ಒಂದಾಗಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬದ ಜತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದರ ಜೊತೆಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಮಾತನಾಡಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ನಡೆಯುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ನಶಿಸಿ ಹೋಗಲಿಕ್ಕೆ ಬಿಡದೆ ಅಗಾಧವಾಗಿ ಬೆಳೆಸಿ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ತಮ್ಮೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ವೈಭವದಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಎಲ್ಲ ವಿದ್ಯಾರ್ಥಿಗಳು ಕೂಡ ಪೋಷಕರೊಂದಿಗೆ ಸಮ್ಮೇಳನದಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಡೀ ರಾಜ್ಯದಿಂದ ಕನ್ನಡಿಗರು ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿಯನ್ನು ಮೆರೆಯಲಾಗುತ್ತದೆ. ಸಮ್ಮೇಳನದಲ್ಲಿ ಕನ್ನಡ ಕವಿಗಳು, ವಿಶೇಷ ಲೇಖನಗಳು, ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಳ್ಳಲು ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಿ ಎಂದರು.

ಪ್ರಶ್ನೆ ಪತ್ರಿಕೆ ತಯಾರಕರಾದ ಮಹೇಶ್, ಶಿವರಾಮು, ಜಿಲ್ಲಾ ಕಸಾಪ ಖಜಾಂಚಿ ಬಿ.ಎಂ.ಅಪ್ಪಾಜಪ್ಪ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ರಂಗಸ್ವಾಮಿ, ಪ್ರಚಾರ ಸಮಿತಿಯ ಸದಸ್ಯ ಶಂಭು, ಈವೆಂಟ್ಸ್ ಅಧ್ಯಕ್ಷ ಸಬ್ಬನಹಳ್ಳಿ ಶಶಿಧರ್, ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಎಂ.ಮಂಚಶೆಟ್ಟಿ, ಉಪನ್ಯಾಸಕ ಹುಚ್ಚೇಗೌಡ, ಚಿಕ್ಕತಿಮ್ಮಯ್ಯ, ಕಿರಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net