

ಮಂಡ್ಯ: ಮಂಡ್ಯ ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕ ದಾಖಲೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಆಶಯ ವ್ಯಕ್ತಪಡಿಸಿದರು.
ಸಮ್ಮೇಳನದ ಅಂಗವಾಗಿ ನಗರದ ಕಾರ್ಮೆಲ್ ಕಾನ್ವೆಂಟ್‌ನಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಮತ್ತು ಮಂಡ್ಯ ಜಿಲ್ಲಾ ಸಾಹಿತ್ಯ ಇತಿಹಾಸ ವೈಶಿಷ್ಟ್ಯ ಕುರಿತು ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 522 ಪ್ರೌಢಶಾಲೆ ಹಾಗೂ ಸುಮಾರು 68,865 ವಿದ್ಯಾರ್ಥಿಗಳಿದ್ದು, ಈ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ 87 ಪ್ರಶ್ನೆಗಳಿದ್ದು, ಭಾಗವಹಿಸುವ ಎಲ್ಲ ಮಕ್ಕಳ ಕುಟುಂಬಕ್ಕೂ ಸಮ್ಮೇಳನಕ್ಕೆ ಆಹ್ವಾನವನ್ನು ನೀಡಲಾಗಿದೆ. ಮಕ್ಕಳಿಗೆ ನಾಡು ನುಡಿಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದರ ಜತೆಗೆ ಜಿಲ್ಲೆಯ ಸುಮಾರು 68,000 ಕುಟುಂಬಗಳಿಗೆ ಸಮ್ಮೇಳನದ ಆಹ್ವಾನವು ತಲುಪುತ್ತದೆ ಎಂದರು.
ಪರೀಕ್ಷೆ ಮೊದಲು ಶಾಲಾ ಹಂತದಲ್ಲಿ ಜಿಲ್ಲೆಯಾದ್ಯಂತ ಏಕಕಾಲಕ್ಕೆ ನಡೆಯಲಿದ್ದು, ನಂತರ ಪ್ರತಿ ಶಾಲೆಯಿಂದ ವಿಜೇತ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ತಾಲೂಕು ಹಂತದಲ್ಲಿ ಸ್ಪರ್ಧೆ ನಡೆಸಲಾಗುವುದು. ತಾಲೂಕು ಹಂತದಲ್ಲಿ ಆಯ್ಕೆಗೊಂಡ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಬಳಿಕ ಪ್ರತಿ ತಾಲೂಕಿನಿಂದ ಮೂರು ಮಕ್ಕಳನ್ನು ಆಯ್ಕೆ ಮಾಡಿ ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಜಿಲ್ಲಾ ಹಂತದಲ್ಲಿ ಆಯ್ಕೆಗೊಂಡ ಮೂರು ಮಕ್ಕಳಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಡಿ.10 ರಂದು ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಪ್ರೌಢಶಾಲಾ ಮಾದರಿಯಲ್ಲೇ ಜಿಲ್ಲೆಯಾದ್ಯಂತ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಜಿಲ್ಲೆಯಲ್ಲಿ ಸುಮಾರು 157 ಪದವಿ ಪೂರ್ವ ಕಾಲೇಜಿಗಳಿದ್ದು, ಅದರಲ್ಲಿ ಸುಮಾರು 28 ಸಾವಿರ ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಕಾಲೇಜು, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಆಯ್ಕೆಗೊಂಡ ವಿಜೇತ ಮಕ್ಕಳಿಗೆ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ಹೇಳಿದರು.
ಕನ್ನಡ ಭಾಷೆಯ ಅಭಿವೃದ್ಧಿ ಹಾಗೂ ಸಾಹಿತ್ಯದ ಬೆಳವಣಿಗೆಯ ಉದ್ದೇಶದಿಂದ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ. ಸಮ್ಮೇಳನದ ಅಂಗವಾಗಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಜತೆಗೆ ಕನ್ನಡ ನಾಡು ನುಡಿಯ ಬಗ್ಗೆ ಎಷ್ಟು ಜ್ಞಾನವನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯಲು ರಸ ಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಪಠ್ಯ ವಿಷಯದ ಜತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ನಾವು ಕನ್ನಡ ಪ್ರಜ್ಞೆ, ಕನ್ನಡ ಪ್ರೇಮವನ್ನು ಜಾಗೃತಿಗೊಳಿಸಬೇಕು. ಕನ್ನಡ ಭಾಷೆಯ ಮೂಲವನ್ನು ತಿಳಿದು ಭಾಷೆಯನ್ನು ಹೇಗೆ ಬೆಳೆಸಬಹುದು ಎಂಬುದರ ಬಗ್ಗೆ ನಮ್ಮ ಚಿತ್ತ ಹರಿಸಬೇಕು. ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಿಳಿದುಕೊಳ್ಳಬಹುದು. ಕನ್ನಡ ನೆಲ, ಜಲ, ಹೆಣ್ಣು ಭ್ರೂಣ ಹತ್ಯೆ ಹಾಗೂ ಮುಂತಾದ ಸಮಸ್ಯೆ ಬಗ್ಗೆ ತಜ್ಞರ ವಿಚಾರಗೋಷ್ಠಿ ನಡೆಸುವುದು. ಅದೆಲ್ಲದರ ಬಗ್ಗೆ ಅರಿವು ಮೂಡಿಸುವುದು ಸಾಹಿತ್ಯ ಸಮ್ಮೇಳನದ ಆಶಯವಾಗಿದೆ ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಸಾಂಸ್ಕೃತಿಕ ಕಲಾತಂಡಗಳಿಂದ ಕಲೆ ಪ್ರದರ್ಶನ ಇರುವುದರಿಂದ ಪ್ರತಿಯೊಬ್ಬರೂ ಪಾಲಕರೊಂದಿಗೆ ಬಂದು ಕಲೆಗಳ ಪ್ರಕಾರವನ್ನು ತಿಳಿದುಕೊಳ್ಳಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್‌ಎಂ.ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದವರಾಗಿದ್ದು, ಅವರನ್ನು ಇಂದು ಸ್ಮರಿಸಬೇಕು. ಜಗತ್ತಿನ ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ಕನ್ನಡ ಭಾಷೆಯ ವೈಶಿಷ್ಟ್ಯತೆಯನ್ನು ತಿಳಿದುಕೊಳ್ಳಲು ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಮೆಲ್ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಗ್ಲಾಡಿಸ್ ಕಾಸ್ಟಲಿನೋ, ಮುಖ್ಯಶಿಕ್ಷಕಿ ಸಿಸ್ಟರ್ ಮೇರಿ ಪೌಲಿನೆ, ಬಿಇಒ ಮಹದೇವು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಹೇಶ್, ರೆಡ್‌ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಪದಾಧಿಕಾರಿಗಳು ಡಾ.ಕೃಷ್ಣೇಗೌಡ ಹುಸ್ಕೂರು, ಚಂದ್ರಲಿಂಗು, ಸಬ್ಬನಹಳ್ಳಿ ಶಶಿಧರ, ಕಬ್ಬನಹಳ್ಳಿ ಶಂಭು, ಎಂ.ಮಂಚಶೆಟ್ಟಿ ಇದ್ದರು.