

ಮಂಡ್ಯ: ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು.
ಡಯಟ್ ಸಂಸ್ಥೆ ಪ್ರಾಂಶುಪಾಲ ಎಂ.ಶಿವಮಾದಪ್ಪ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧೆಯೊಡ್ಡುವುದು ಕಷ್ಟದಾಯಕ ಎಂಬ ಕಾರಣದಿಂದಾಗಿ ಐಟಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯಗಳ ಕೊರತೆ ಇದೆ. ಜಿಲ್ಲೆಯ 214 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಇದೆ. ಉಳಿದಂತೆ ಕೆಲ ಶಾಲೆಗಳಲ್ಲಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಕೆ ಮಾಡಿಕೊಂಡು ಪೊಜೆಕ್ಟರ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಆದರೆ ಖಾಸಗೀ ಶಾಲೆಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಂಡಿರುತ್ತಾರೆ ಎಂದು ಉದಾಹರಣೆ ಸಮೇತ ವಿವರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿ ಮಹೇಶ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಉಪ ಯೋಜನಾಧಿಕಾರಿ ಟಿ.ಲಕ್ಷ್ಮೀ, ವಿಷಯ ಪರಿವೀಕ್ಷಕ ನಂಜರಾಜು, ನಾಗರಾಜು, ಜಾಕೀರ್ ಪಾಷ, ನೋಡಲ್ ಅಧಿಕಾರಿ ಎಸ್.ಲೋಕೇಶ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜು ಇತರರಿದ್ದರು.