

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶನದೊಂದಿಗೆ ವಿಜ್ಞಾನ, ಗಣಿತ ಹಾಗೂ ಸಾಮಾನ್ಯ ಜ್ಞಾನ ವಿಷಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಶುಕ್ರವಾರ ಸಮಾಪನಗೊಂಡಿತು.
ಮೂರು ಹಂತಗಳಲ್ಲಿ ಪ್ರತ್ಯೇಕವಾಗಿ ನಡೆದ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ.ಜಿ. ಉದ್ಘಾಟಿಸಿ, ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಜ್ಞಾನದ ಪ್ರತಿಭೆ ಹೊರ ತರಲು ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸುವುದು ಸೂಕ್ತ ಎಂದರು.
ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ, ಶಾಲಾ ಹಿತೈಷಿ ಜಯರಾಮ ಶೆಟ್ಟಿ ಕಂಬಳಪದವು, ಪ್ರಾಂಶುಪಾಲ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀನಿವಾಸ ಭಟ್ ಸ್ವಾಗತಿಸಿದರು. ಚಂದ್ರ ಕುಮಾರ್ ವಂದಿಸಿದರು. ಶಿಕ್ಷಕಿಯರಾದ ವಿದ್ಯಾ, ದೀಪಿಕಾ, ಶಿಕ್ಷಕ ಶ್ರೀನಿವಾಸ ಭಟ್ ಕ್ವಿಜ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು.
ವಿಜೇತ ತಂಡಗಳು
ವಿಜ್ಞಾನ ವಿಭಾಗದಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರ ಪ್ರಥಮ, ಮಂಜನಾಡಿ ಅಲ್ ಮದೀನಾ ಶಾಲೆ ದ್ವಿತೀಯ, ಜೆನಿತ್ ಶಾಲೆ ತೃತೀಯ ಸ್ಥಾನ ಪಡೆಯಿತು. ಗಣಿತ ವಿಭಾಗದಲ್ಲಿ ಮಾಣಿಲ ಸರ್ಕಾರಿ ಪ್ರೌಢಶಾಲೆ ಪ್ರಥಮ, ಶಾರದಾ ಗಣಪತಿ ವಿದ್ಯಾಕೇಂದ್ರ ದ್ವಿತೀಯ, ಅಲ್ ಮದೀನಾ ಶಾಲೆ ತೃತೀಯ ಸ್ಥಾನ ಪಡೆಯಿತು. ಸಾಮಾನ್ಯ ಜ್ಞಾನ ವಿಭಾಗದಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರ ಪ್ರಥಮ, ಮಾಣಿಲ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಹಾಗೂ ಅಲ್ ಮದೀನಾ ಶಾಲೆ ತೃತೀಯ ಸ್ಥಾನ ಪಡೆಯಿತು.