

ಮಡಿಕೇರಿ:
ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಕನ್ನಡ ಭಾಷೆ ನಾಡು ನುಡಿ ಅತಿ ಉತ್ಕೃಷ್ಟವಾದದ್ದು ಎಂದು ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ. ನಾಸಿರ್ ಅಹಮದ್ ಹೇಳಿದರು. ಶನಿವಾರ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎ.ಎಲ್.ಜಿ ಕ್ರೆಸೆಂಟ್ ಶಾಲೆ, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಹಾಗೂ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ವತಿಯಿಂದ ಮಡಿಕೇರಿಯ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಪ್ರೇಮ ಸಾಹಿತ್ಯ, ದಾಂಪತ್ಯ ಸಾಹಿತ್ಯ ಈ ಹಲವಾರು ವಿಭಾಗಗಳಿದ್ದು ಎಲ್ಲವೂ ಅತ್ಯುನ್ನತ ಪರಂಪರೆ ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಬೇಕು. ಕನ್ನಡ ನಾಡು ನುಡಿಯ ವಿಚಾರ ತಿಳಿಯಬೇಕು. ಕನ್ನಡ ಗೀತೆಗಳನ್ನು ಹಾಡುವ ಮೂಲಕ ಅದರ ಅರಿವು ಅವರಿಗೆ ಮೂಡಬೇಕು ಎಂದು ಹೇಳಿದರು.
ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ಹೆಚ್. ಹನೀಫ್ ಮಾತನಾಡಿದರು. ಶಾಲೆಯ ಅಧ್ಯಕ್ಷ ನಿಝಾಮುದ್ದೀನ್ ಸಿದ್ದೀಖಿ, ಉಪಾಧ್ಯಕ್ಷ ಅನೀಸ್ ಜವಾಹರ್, ನಿರ್ದೇಶಕ ಉಮ್ಮರ್ ಚಡಖಾನ್, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಐ. ಮುನೀರ್ ಅಹಮದ್, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕೋಶಾಧಿಕಾರಿ ಸಂಪತ್ ಕುಮಾರ್, ಸಾಹಿತಿಗಳಾದ ಬೈತಡ್ಕ ಜಾನಕಿ, ಗೌರಮ್ಮ ಮಾದಮ್ಮಯ್ಯ, ಭಾರತಿ ರಮೇಶ್, ಕಟ್ಟರ್ತನ ಲಲಿತ ಅಯ್ಯಣ್ಣ, ಚೊಕ್ಕಾಡಿ ಪ್ರೇಮ ರಾಘವಯ್ಯ, ರಾಧಾ ಪೊನ್ನಪ್ಪ, ಶರೀಫ್ ಶಾಲಾ ಅಧ್ಯಾಪಕರುಗಳು ಇದ್ದರು.
ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ, ಕವನ ವಾಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. 15 ಶಾಲೆಗಳ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಿತ್ಯಶ್ರೀ ಎಂಎಸ್ ಮತ್ತು ಚೇತನ್ ಪಿ. ಸಿ. ಪ್ರಥಮ, ನಾಪೋಕ್ಲುವಿನ ಎಕ್ಸೆಲ್ ಎಜುಕೇಶನ್ ಶಾಲೆಯ ಸುಮಂತ್ ಟಿ. ಆರ್. ಮತ್ತು ದರ್ಶ ದೇಶಮ್ಮ ದ್ವಿತೀಯ ಹಾಗೂ ನಾಪೋಕ್ಲು ರಾಫೆಲ್ಸ್ ವಿದ್ಯಾಸಂಸ್ಥೆಯ ಮೆಹರೂಫ್ ಮತ್ತು ಸಲ್ಮಾನ್ ಫಾರಿಸ್ ತೃತೀಯ ಬಹುಮಾನ ಪಡೆದುಕೊಂಡರು.