

ಗುಂಡ್ಲುಪೇಟೆ : ಮದ್ಯಪಾನ ಉಂಟು ಮಾಡುವ ಅನಾಹುತದಿಂದ ಜನರನ್ನು ರಕ್ಷಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಕೈಗೊಂಡಿರುವ ಶಿಬಿರ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಬ್ಬಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ 1764ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನಾ ಕಾರಣಗಳಿಂದ ದುಶ್ಚಟಕ್ಕೆ ಒಳಗಾಗಿದ್ದ 60 ಜನರು ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ. ಇವರು ಮದ್ಯ ವ್ಯಸನವನ್ನು ತ್ಯಜಿಸಿ ನವ ಜೀವನ ನಡೆಸಲು ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಜನ ಜಾಗೃತಿ ಅಧ್ಯಕ್ಷ ಎಸ್.ಎಂ.ರವಿಶಂಕರ್, ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ಕಬ್ಬಳ್ಳಿ ಪಟ್ಟದ ಮಠದ ಗುರುಸಿದ್ಧ ಸ್ವಾಮೀಜಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್, ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್ ಇದ್ದರು.
ಕಬ್ಬಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಹತ್ತು ದಿನಗಳಿಂದ ಶಿಬಿರ ನಡೆಯುತ್ತಿತ್ತು. ಮಂಗಳವಾರ ಶಿಬಿರಕ್ಕೆ ತೆರೆಬಿದ್ದಿದ್ದು, 60 ಜನರು ಪ್ರಯೋಜನ ಪಡೆದುಕೊಂಡಿದ್ದಾರೆ.