

ಮಂಗಳೂರು: ಗಾಂಧಿ ವಿಚಾರಧಾರೆ, ಚಿಂತನೆ ಕೇಳಲು ಕೂಡ ಹೆಚ್ಚಿನ ಯುವಜನರು ನಿರಾಸಕ್ತರಾಗಿದ್ದಾರೆ. ಗಾಂಧಿ ಕಾರ್ಯಕ್ರಮಗಳಲ್ಲಿ ಹಿರಿಯರು ಮತ್ತು ಸಣ್ಣ ಮಕ್ಕಳು ಮಾತ್ರ ಅಧಿಕ ಸಂಖ್ಯೆಯಲ್ಲಿ ಗೋಚರಿಸುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಬಾವುಟಗುಡ್ಡೆಯ ಟಾಗೋರ್‌ಪಾರ್ಕ್‌ನಲ್ಲಿ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಟಾನದ ವತಿಯಿಂದ ಶುಕ್ರವಾರ ಆಯೋಜಿಸಲಾದ ಕ್ವಿಟ್ ಇಂಡಿಯಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ನೇತೃತ್ವದ ಅಹಿಂಸಾ ಚಳವಳಿಯ ಮೂಲಕ ದೇಶದಿಂದ ಬ್ರಿಟಿಷರು ತೊಲಗಿದರೂ, ಅವರ ಚಿಂತನೆ, ಕರಿನೆರಳು ಮಾತ್ರವಲ್ಲ, ಬಿಳಿ ನೆರಳೂ ನಮ್ಮಲ್ಲಿ ಉಳಿದುಕೊಂಡಿದೆ. ಮೆಕಾಲೆಗಳು ಇನ್ನೂ ಜೀವಂತವಾಗಿ ಉಳಿದಿದ್ದಾರೆ. ಈ ಭೂಮಿಯಲ್ಲಿ ವಿಷ ಬೀಜ ಬಿತ್ತಲು ಅವಕಾಶವಿಲ್ಲ ಎನ್ನುವ ಗಾಂಧಿ ಮಾತನ್ನು ಜನರು ಕೇಳಿಸಿಕೊಳ್ಳಲೇ ಇಲ್ಲ. ಅದರ ಪರಿಣಾಮವನ್ನು ನಾವು ಈವತ್ತಿಗೂ ಎದುರಿಸುತ್ತಿದ್ದೇವೆ ಎಂದು ಅವರು ಹೇಳುದರು.
ನಮ್ಮ ಚರಿತ್ರೆಯ ಎಲ್ಲಾ ಘಟ್ಟಗಳು, ಸ್ವಾತಂತ್ರೃ ಹೋರಾಟದ ನೆನಪುಗಳು ನಮ್ಮ ರಕ್ತದ ಜತೆ ಸೇರಿಕೊಂಡಿವೆ. ಅಹಿಂಸೆಯ ಮೂಲಕ ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರ ಧ್ಯೇಯ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂಬುದು ಮಾತ್ರವಾಗಿರಲಿಲ್ಲ. ನಮ್ಮಲ್ಲಿ ಬೇರೂರಿರುವ ಅಸಮಾನತೆ, ಧರ್ಮ ಮತ್ತು ಜಾತಿಯ ಕುರಿತಾದ ಅತಿಯಾದ ಮೋಹ, ಮೌಢ್ಯಗಳಿಂದ ಕಲುಷಿತಗೊಂಡಿದ್ದ ಸಮಾಜವನ್ನು ಸುಧಾರಿಸುವ ಭವಿಷ್ಯದ ಚಿಂತನೆಯೂ ಇತ್ತು. ಧರ್ಮದ ಮೇಲಿನ ವ್ಯಾಮೋಹ ಹಿಂಸೆಗೆ ಪ್ರೇರಣೆ ನೀಡುತ್ತದೆ ಎಂಬ ಎಚ್ಚರಿಕೆಯನ್ನು ಹೊಂದಿದ್ದ ಅವರು ಅಹಿಂಸೆಯ ಮೂಲಕವೇ ಹೋರಾಟವನ್ನು ತನ್ನದಾಗಿಸಿಕೊಂಡಿದ್ದರು ಎಂದು ಅವರು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, ಬ್ರಿಟಿಷರು ದೇಶ ಬಿಟ್ಟು ತೊಲಗುವಂತೆ ನಡೆದ ಸ್ವಾತಂತ್ರೃ ಪೂರ್ವದ, ಸ್ವಾತಂತ್ರೃಕ್ಕಾಗಿನ ಅಂದಿನ ಭಾರತೀಯ ಹೋರಾಟದ ಕಿಚ್ಚು ಅವಿಸ್ಮರಣೀಯ. ಅದನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಝಾನ್ಸಿ ರಾಣಿ ಲಕ್ಷ್ಮೀ ಭಾಯಿ ಅವರಿಂದ ಬ್ರಿಟಿಷರ ವಿರುದ್ಧದ ಹೋರಾಟ ಆರಂಭಗೊಂಡು ಮಹಾತ್ಮಗಾಂಧಿ ನೇತೃತ್ವದ ಅಹಿಂಸಾ ಚಳವಳಿವರೆಗೆ ನಡೆದಿದೆ. ಅವರೆಲ್ಲರ ಹೋರಾಟವನ್ನು ನೆನಪಿಸುವ ಕಾರ್ಯ ಇಂತಹ ಕಾರ್ಯಕ್ರಮಗಳ ಮೂಲಕ ಆಗುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಗೋರ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಬೃಹತ್ ಧ್ವಜಸ್ತಂಭ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ಶಂಕುಸ್ಥಾಪನೆ ನಡೆಯಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ವಹಿಸಿದ್ದರು. ಪ್ರತಿಷ್ಟಾನದ ಉಪಾಧ್ಯಕ್ಷ ಬಿ. ಪ್ರಭಾಕರ ಶ್ರೀಯಾನ್, ಇಬ್ರಾಹೀಂ ಕೋಡಿಜಾಲ್, ಸಹ ಕೋಶಾಧಿಕಾರಿ ಪ್ರೇಮ್‌ಚಂದ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಡಾ. ಇಸ್ಮಾಯಿಲ್ ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ವಿಟ್ ಇಂಡಿಯಾ ಕುರಿತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
---------
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿದ್ದ ಗಾಂಧಿ ಅಧ್ಯಯನ ಕೇಂದ್ರ ಪ್ರಸ್ತುತ ಇಲ್ಲ. ಅದನ್ನು ಮರು ಸ್ಥಾಪಿಸುವ ಸಲುವಾಗಿ ಯುಜಿಸಿಗೆ ಪತ್ರ ಬರೆಯಲಾಗಿದೆ. ಯುಜಿಸಿ ನಮ್ಮ ಮನವಿ ಮಾನ್ಯ ಮಾಡುತ್ತದೆ ಎಂದು ಭರವಸೆ ಇದೆ.
* ಪ್ರೊ. ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿವಿ.