ಕಡತಗಳನ್ನು ಶೀಘ್ರ ವಿಲೇಮಾರಿ ಮಾಡಿ

IMG-20240517-WA0119
ಹನಗೋಡು ನಾಡ ಕಚೇರಿಗೆ ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ ದಿಢೀರ್ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದರು. ಉಪ ತಹಸಿಲ್ದಾರ್ ಚಲುವರಾಜ್ ಇದ್ದರು.
Published on

ಹನಗೋಡು: ಹನಗೋಡಿನ ನಾಡ ಕಚೇರಿಗೆ ಹುಣಸೂರು ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದರು.


ಕಳೆದ ಮೂರು, ನಾಲ್ಕು ದಿನಗಳಿಂದ ಹನಗೋಡು ಭಾಗದಲ್ಲಿ ಉಂಟಾಗಿರುವ ಮಳೆ ಹಾನಿ ವೀಕ್ಷಣೆಗೆ ಉಪವಿಭಾಗಾಧಿಕಾರಿಗಳು ಆಗಮಿಸಿದ ವೇಳೆ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಇಲ್ಲದಿರುವುದನ್ನು ಕಂಡು ಗರಂ ಆದರು. ಜಮಾಬಂದಿ, ಭೂ ಕಂದಾಯ ಬೇಡಿಕೆಯ ವಿವರ, ಕರ ವಸೂಲಾತಿ, ಬ್ಯಾಂಕಿಗೆ ಕರ ಸಂದಾಯ ಮಾಡಿದ ರಿಜಿಸ್ಟರ್, ಸಾಮಾನ್ಯ ಮಾಹಿತಿ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ಸೇರಿ ಇತರ ದಾಖಲಾತಿಗಳನ್ನು ಪರಿಶೀಲಿಸಿ ಸ್ಥಳದಲ್ಲಿದ್ದ ಉಪ ತಹಸೀಲ್ದಾರ್ ಚಲುವರಾಜ್ ಅವರಿಂದ ಮಾಹಿತಿ ಪಡೆದು, ಬಾಕಿ ಇರುವ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕೆಂದು ಸೂಚಿಸಿದರು.


ಸಮಸ್ಯೆಗಳ ಸುರಿಮಳೆ: ನಾಡ ಕಚೇರಿಗೆ ಉಪ ವಿಭಾಗಾಧಿಕಾರಿ ಭೇಟಿ ನೀಡಿದ ವೇಳೆ ಕಚೇರಿಯಲ್ಲಿದ್ದ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಗೈದರು. ಕೆಲ ಗ್ರಾಮ ಲೆಕ್ಕಾಧಿಕಾರಿಗಳು ನಿಯೋಜಿಸಿರುವ ಕೇಂದ್ರ ಸ್ಥಾನಗಳಲ್ಲಿದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ರೈತರು ಬೆಳೆ ವಿಮೆ ತುಂಬಲು ಬಂದರೂ, ಇಲ್ಲಿ ಪಹಣಿಗಳು ಬರುತ್ತಿಲ್ಲ, ಸಿಬ್ಬಂದಿಯನ್ನು ಕೇಳಿದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ ಎಂದು ಆರೋಪಿಸಿದರು.


ವಿದ್ಯಾರ್ಥಿಗಳು ಜಾತಿ, ಆದಾಯ, ವಾಸ ಸ್ಥಳ ಸೇರಿ ನಾನಾ ಪ್ರಮಾಣಪತ್ರಗಳಿಗೆ ಅರ್ಜಿ ಹಾಕಿ ತಿಂಗಳುಗಟ್ಟಲೆ ಕಚೇರಿಗೆ ಅಲೆಯಬೇಕಾಗಿದೆ. ಕಾರ್ಯಾಲಯದಲ್ಲಿ ಸಿಬ್ಬಂದಿ ಕೊರತೆಯಿದೆ. ಪ್ರತಿ ಗ್ರಾಮ ಲೆಕ್ಕಾಧಿಕಾರಿಗೆ ಐದಾರು ಸರ್ಕಲ್‌ಗಳ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೆ ಇತರ ಕೆಲಸಕ್ಕೆ ನಿಯೋಜಿಸಿದ್ದಾರೆ. ಇದರಿಂದ ಜನರು ತಮ್ಮ ಕೆಲಸಗಳಿಗೆ ಅಧಿಕಾರಿಗಳನ್ನು ಹುಡುಕಿಕೊಂಡು ಬಂದು ವಾಪಸ್ ಹೋಗುವ ಪರಿಸ್ಥಿತಿ ಇದೆ ಎಂದು ದೂರಿದರು. ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ವಿಭಾಗಾಧಿಕಾರಿ, ಕೂಡಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹಾರಿಸುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.


ನ್ಯೂನತೆಗಳನ್ನು ಸರಿಪಡಿಸಿರಬೇಕು: ಇಲ್ಲಿನ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ, ಆಧಾರ್ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳಿಗೆ ನಿಗದಿಗೊಳಿಸಿರುವ ದರ ಪಟ್ಟಿ ಹಾಕದಿರುವುದು ಸೇರಿದಂತೆ ಹಲವು ಲೋಪ-ದೋಷಗಳು ಕಂಡು ಗರಂ ಆದರು. ನಾನು ಮತ್ತೆ ಈ ವಾರದಲ್ಲೇ ಭೇಟಿ ನೀಡುತ್ತೇನೆ. ಆ ವೇಳೆಗೆ ಈ ಎಲ್ಲ ನ್ಯೂನತೆಗಳನ್ನು ಸರಿಪಡಿಸಿರಬೇಕೆಂದು ಸೂಚಿಸಿದರು.


ಆರೋಗ್ಯ ಕೇಂದ್ರಕ್ಕೆ ಭೇಟಿ:ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ, ವಾರದ ಹಿಂದೆ ಕಡೆಮನುಗನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜಿನಿಂದಾದ ವಾಂತಿ-ಭೇದಿ ಪ್ರಕರಣದ ಬಗ್ಗೆ ಕರ್ತವ್ಯ ನಿರತ ವೈದ್ಯಾಧಿಕಾರಿ ಡಾ.ಜೋಗೇಂದ್ರನಾಥ್ ಅವರಿಂದ ಮಾಹಿತಿ ಪಡೆದರು. ರೋಗಿಗಳ ಆರೈಕೆಗೆ ಕೈಗೊಂಡ ವೈದ್ಯಕೀಯ ತುರ್ತು ಸೇವೆ ಹಾಗೂ ಕ್ರಮಗಳ ಬಗ್ಗೆ ವೈದ್ಯರ ತಂಡ ಹಾಗೂ ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಚೆಲುವರಾಜು, ನಾಡ ಕಚೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net