

ರಾಮದುರ್ಗ: ಇತ್ತೀಚೆಗೆ ಸುರಿದ ಮಳೆಯಿಂದ ಮೆಕ್ಕೆಜೋಳ, ಈರುಳ್ಳಿ, ಹತ್ತಿ ಸೇರಿ ಹಲವು ಬೆಳೆಗಳು ನಾಶವಾಗಿವೆ. ಹಾನಿಯಾದ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿ, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ರಾಮದುರ್ಗ ಘಟಕದ ನೇತತ್ವದಲ್ಲಿ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ಹಲವು ಬೆಳೆಗಳು ಕಟಾವು ಹಂತ ತಲುಪಿದ್ದಾಗಲೇ ಅತಿ ಮಳೆಯಿಂದ ಸಂಪೂರ್ಣ ಹಾನಿವಾಗಿವೆ. ರೈತರು ಸಲ್ ಬಿಮಾ ಯೋಜನೆ ಕಂತು ಪಾವತಿ ಮಾಡಿದ್ದು, ವಿಮಾ ಕಂಪನಿಯ ಮೂಲಕ ಪರಿಹಾರ ರೈತರನ್ನು ಸೇರುವಂತೆ ಮಾಡಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಬೆಳೆ ಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು.
ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರೂ, ಸಕಾಲಕ್ಕೆ ತೆರೆಯುವ ಕೆಲಸ ಮಾಡಿಲ್ಲ. ರೈತರು ಮಾರುಕಟ್ಟೆಯಲ್ಲಿ ಮಾರಿದ ನಂತರ ಖರೀದಿ ಕೇಂದ್ರ ತೆರೆಯುವಂತಹ ವಾತಾವರಣ ಬದಲಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೆ ಬೆಳೆಹಾನಿ ಸಮೀಕ್ಷೆ ವಿಷಯದಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರೈತರಿಗೆ ಸೂಕ್ತ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ರೈತಪರ ಸಂಘಟನೆಗಳ ನೇತತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂಘದ ತಾಲೂಕಾಧ್ಯಕ್ಷ ಸುರೇಶ ನಂದೆಪ್ಪನವರ, ನಿಕಟಪೂರ್ವ ಅಧ್ಯಕ್ಷ ಬಸವರಾಜ ಕೋನನ್ನವರ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಗಾಣಗಿ, ಉಪಾಧ್ಯಕ್ಷ ಶಿವನಗೌಡ ಕುಲಕರ್ಣಿ, ಮೌನೇಶ ಕಂಬಾರ, ಪವನ ಅಂಗಡಿ, ಶ್ರೀನಿವಾಸ ದ್ಯಾವನ್ನವರ, ಆನಂದ ಪೂಜಾರ, ಎ್.ಬಿ. ರಂಗನಗೌಡ್ರ, ಆರ್.ಎ. ನಡಮನಿ, ಎಸ್.ಬಿ. ವಗ್ಗರ, ಬಿ.ಜಿ. ರುದ್ರಗೌಡ್ರ, ಈರನಗೌಡ ಪಾಟೀಲ ಇತರರಿದ್ದರು.