

ಹುಬ್ಬಳ್ಳಿ: ಈಗಾಗಲೇ 57 ಅನಧಿಕೃತ ಲೇಔಟ್ ಗುರುತಿಸಿ ತೆರವು ಕಾರ್ಯ ಕೈಗೊಂಡಿರುವ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ), ಎರಡನೇ ಹಂತದ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.
ಅವಳಿ ನಗರದಲ್ಲಿ 170ರಷ್ಟು ಅನಧಿಕೃತ ಲೇಔಟ್ಗಳನ್ನು ಪತ್ತೆ ಹಚ್ಚಲಾಗಿದೆ. ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಲೇಔಟ್ಗಳು ಇದ್ದು, ಅಲ್ಲಿಂದಲೇ ಕಾರ್ಯಾಚರಣೆ ಆರಂಭಿಸಲು ಹುಡಾ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪೊಲೀಸ್ ಇಲಾಖೆ, ಹೆಸ್ಕಾಂ, ಮಹಾನಗರ ಪಾಲಿಕೆ ಸೇರಿ ವಿವಿಧ ಅಧಿಕಾರಿಗಳ ಸಹಕಾರದಿಂದ ಅಕ್ರಮ ಲೇಔಟ್ ತೆರವು ನಡೆಯಬೇಕಾಗುತ್ತದೆ. ಈಗಾಗಲೇ ಎಲ್ಲ ಇಲಾಖೆಗಳೊಂದಿಗೆ ಮಾತುಕತೆ ನಡೆಸಿದ್ದು, ಬರುವ ಸೋಮವಾರ(ಜ. 11)ದಿಂದ ಕ್ಷೇತ್ರಕ್ಕಿಳಿಯಲಿದ್ದೇವೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ‘ವಿಜಯವಾಣಿ’ಗೆ ತಿಳಿಸಿದರು.
ಆರು ತಿಂಗಳ ಹಿಂದೆ ಅಕ್ರಮ ಲೇಔಟ್ ವಿರುದ್ಧ ಹುಡಾ ಕ್ರಮ ಕೈಗೊಂಡಿತ್ತು. ಕೆಲವೆಡೆ ಜೆಸಿಬಿ ಸಮೇತ ಹೋಗಿ ತೆರವು ಮಾಡಲಾಗಿತ್ತು. ಅದಾದ ನಂತರ ವಿವಿಧ ಕಾರಣಗಳಿಂದ ಬಿಡುವು ನೀಡಲಾಗಿತ್ತು. ಇದರಿಂದಾಗಿ ಅಕ್ರಮದ ವಿರುದ್ಧ ಮತ್ತೆ ಕಾರ್ಯಾಚರಣೆ ನಡೆಯುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಮೂಡಿದ್ದವು. ಇದೀಗ ಹುಡಾ ಮತ್ತೆ ಎಲ್ಲ ಸಿದ್ಧತೆಗಳೊಂದಿಗೆ ಎರಡನೇ ಹಂತದ ಕಾರ್ಯಾಚರಣೆಗೆ ಧುಮುಕುತ್ತಿದೆ.
120 ಎಕರೆ ಹೊಸ ಲೇಔಟ್:
ಹುಡಾ ಹಾಗೂ ರೈತರ ಸಹಯೋಗದಲ್ಲಿ ಹೊಸ ವಸತಿ ಯೋಜನೆ ರೂಪಿಸಲಾಗುತ್ತಿದೆ.
ಅವಳಿನಗರದಲ್ಲಿ ಸಾವಿರಾರು ಜನರು ನಿವೇಶನ ರಹಿತರು ಇದ್ದು, ಅವರಿಗೆ ಯೋಗ್ಯ ದರದಲ್ಲಿ ಸೂರು ಕಲ್ಪಿಸಬೇಕಾಗಿದೆ. ಅದಕ್ಕಾಗಿ ಶೇ. 50-50 ಅನುಪಾತದಲ್ಲಿ ವಸತಿ ಯೋಜನೆ ರೂಪಿಸಲು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಹಲವು ರೈತರೊಂದಿಗೆ ಚರ್ಚೆ ಮಾಡಲಾಗಿದೆ. ಈಗಾಗಲೇ ಕೆಲವು ರೈತರು ಇದರಡಿ ವಸತಿ ಯೋಜನೆ ರೂಪಿಸಲು ಮುಂದೆ ಬಂದಿದ್ದಾರೆ. ಅವರೊಂದಿಗೆ ಶೀಘ್ರದಲ್ಲೇ ಅಧಿಕೃತ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ತಿಳಿಸಿದ್ದಾರೆ.
ಧಾರವಾಡದ ಮನಸೂರ ರಸ್ತೆಯಲ್ಲಿನ 40 ಎಕರೆ ಸೇರಿ ಮೂರು ಕಡೆ ಒಟ್ಟು 120 ಎಕರೆ ಸದ್ಯಕ್ಕೆ ಲಭ್ಯವಿದೆ. ಇದರಿಂದ ವಸತಿ ರಹಿತರಿಗೆ ಬಹಳಷ್ಟು ಅನುಕೂಲವಾಗಲಿದೆ.
ಗುಂಪು ಮನೆ
ಧಾರವಾಡದ ಮೂರು ಕಡೆ ಗ್ರುಪ್ ಹೌಸಿಂಗ್ ಸಲುವಾಗಿ ಹುಡಾ ಜಾಗ ಗುರುತಿಸಿದೆ. ಯೋಜನೆಯ ಸಮಗ್ರ ವಿವರದೊಂದಿಗೆ ನಗರಾಭಿವೃದ್ಧಿ ಇಲಾಖೆಗೆ ಅಧಿಕಾರಿಗಳು ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಿ ಪ್ಲಸ್ 3 ಅಪಾರ್ಟ್ವೆುಂಟ್ ಮಾದರಿಯಲ್ಲಿ ಮನೆ ನಿರ್ವಿುಸಿಕೊಡುವ ಯೋಜನೆ ಇದಾಗಿದೆ. ಇದಕ್ಕೆ ಸರ್ಕಾರ ಅನುಮೋದನೆ ನೀಡಬೇಕಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವರ ಮುಂದೆ ಮತ್ತೆ ಪ್ರಸ್ತಾಪಿಸಲಾಗುವುದು. ಪ್ರಾಧಿಕಾರದ ವಿವಿಧ ಯೋಜನೆಗಳ ಕುರಿತು ಸಹ ಸಚಿವರ ಗಮನ ಸೆಳೆಯಲಾಗುವುದು ಎಂದು ನಾಗೇಶ ಕಲಬುರ್ಗಿ ತಿಳಿಸಿದ್ದಾರೆ.