ರಸ್ತೆ, ಚರಂಡಿ ಸಮಸ್ಯೆಗೆ ಶೀಘ್ರ ಪರಿಹಾರ

25 nrp 2
Published on

ಬೀರೂರು: ಪುರಸಭೆ ವ್ಯಾಪ್ತಿಯ ಬಹಳಷ್ಟು ವಾರ್ಡ್‌ಗಳು ರಸ್ತೆ, ಚರಂಡಿ ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಬುಧವಾರ 4 ಕೋಟಿ ರೂ.ವೆಚ್ಚದಲ್ಲಿ ಲಿಂಗದಹಳ್ಳಿ ರಸ್ತೆ ಅಗಲೀಕರಣ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಲಿಂಗದಹಳ್ಳಿ ರಸ್ತೆಯಲ್ಲಿ ಬಹಳಷ್ಟು ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇದು ಉತ್ತಮ ವ್ಯವಹಾರಿಕ ಪ್ರದೇಶವಾಗಿದ್ದು, ಸುಸಜ್ಜಿತ ರಸ್ತೆಯಿಂದ ಇನ್ನಷ್ಟು ವಹಿವಾಟುಗಳು ನಡೆಯಲಿವೆ ಎಂದರು.

ರಾಷ್ಟ್ರೀಯ ಹೆದ್ದಾರಿ 206ನ್ನು ಅಭಿವೃದ್ಧಿಪಡಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲು ಕಾಲಾವಕಾಶದ ಅಗತ್ಯವಿದೆ. ಇರುವ ಅನುದಾನವನ್ನು ಲಿಂಗದಹಳ್ಳಿ ರಸ್ತೆಯ ಅಗಲೀಕರಣ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಅಜ್ಜಂಪುರ ರಸ್ತೆಯ ಶಿವಾಜಿ ಪುತ್ತಳಿವರಗೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯ ಭಗವತ್ ನಗರ, ಪುರಿಭಟ್ಟಿ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿಗಳ ಸಮಸ್ಯೆ ಬಗೆಹರಿಸಿಕೊಡಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಮಾತನಾಡಿ, ಬೆಳೆಯುತ್ತಿರುವ ನಗರಗಳಿಗೆ ಸುಸಜ್ಜಿತ ರಸ್ತೆಗಳ ಅಗತ್ಯವಿದೆ. ಕಿರಿದಾದ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚು. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪ್ರತಿ ವಾರ್ಡ್‌ಗೆ ಒಂದೊಂದು ಕೊಳವೆ ಬಾವಿ ಕೊರೆಸಿಕೊಡಬೇಕು ಎಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯರಾದ ಬಿ.ಕೆ.ಶಶಿಧರ್, ಮಾನಿಕ್ ಬಾಷಾ, ರವಿಕುಮಾರ್, ಲೋಕೇಶಪ್ಪ , ಜ್ಯೋತಿ ಸಂತೋಷ್, ರಾಜು, ಮುಖ್ಯಾಧಿಕಾರಿ ಜಿ.ಪ್ರಕಾಶ್, ಪಿಡಬ್ಲೂಡಿ ಎಇಇ ಬಸವರಾಜ್, ಮುಬಾರಕ್, ಕಾಂತರಾಜ್, ಪ್ರದೀಪ್, ಕೆ.ಎನ್.ಆನಂದ್, ಆರೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net