ಮಳೆ-ಪ್ರವಾಹ ಹಾನಿಗೆ ಶೀಘ್ರ ಪರಿಹಾರ - 4 ಜೀವ ಹಾನಿ ಸಾವಿರಾರು ಹೆಕ್ಟೇರ್ ಬೆಳೆ ನಾಶ

bkt-17-3
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧ್ಯಕ್ಷತೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಪರಿಶೀಲನಾ ಸಭೆ ಜರುಗಿತು. ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ಇದ್ದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಗೆ ಶೀಘ್ರ ಪರಿಹಾರ ಒದಗಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆ ಹಾನಿ ಸಮೀಕ್ಷೆಗೆ ಇಂಜಿನಿಯರಗಳ ಕೊರತೆ ಇದ್ದಲ್ಲಿ ಬೇರೆ ಬೇರೆ ಇಲಾಖೆಗಳ ಇಂಜಿನಿಯರ್‌ಗಳನ್ನು ನಿಯೋಜಿಸಿ ಸಮೀಕ್ಷೆ ತೀವ್ರಗೊಳಿಸುವ ಮೂಲಕ ತಕ್ಷಣ ಪರಿಹಾರ ವಿತರಿಸುವ ಕಾರ್ಯವಾಗಬೇಕು. ನಿರಂತರ ಮಳೆ ಮತ್ತು ಪ್ರವಾಹ ಸನ್ನಿವೇಶ ನೋಡಿಕೊಂಡು ಜನರು ತಮ್ಮ ಸಂಬಂಧಿಕರ ಮನೆಗೆ ಹೋಗಿರುವ ಸಾಧ್ಯತೆ ಇರುತ್ತದೆ. ಇದನ್ನೇ ಮನೆಯಲ್ಲಿ ಯಾರೂ ವಾಸವಿಲ್ಲ ಅಂತ ತಿಳಿದು ಆ ಮನೆ ಸಮೀಕ್ಷೆಯಿಂದ ಕೈಬಿಡಬಾರದು. ಬಡವರ ಮನೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಳೆಗೆ ಹಾನಿಯಾಗಿದ್ದು, ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಬಾದಾಮಿ ತಾಲೂಕಿಗೆ ಸಂಬಂಧಿಸಿದಂತೆ 2 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ಎ ಮತ್ತು ಬಿ-1, ಬಿ-2 ವರ್ಗದ ಮನೆಗಳಿಗೆ ಮೊದಲ ಹಂತದ ಅನುದಾನವನ್ನು ತಕ್ಷಣ ವಿತರಿಸಬೇಕು. ಸಿ ಕೆಟಗರಿಯಲ್ಲಿರುವ ಮನೆಗಳಿಗೆ ಒಂದೇ ಬಾರಿಗೆ  50 ಸಾವಿರದಂತೆ ಬಿಡುಗಡೆ ಮಾಡತಕ್ಕದ್ದು. ಅದೇ ರೀತಿ ಇತರ ತಾಲೂಕುಗಳಲ್ಲಿ ಆಗಿರುವ ಮನೆ ಹಾನಿಗೆ ಎರಡು ದಿನಗಳಲ್ಲಿ ಪರಿಹಾರ ವಿತರಣೆಯಾಗಬೇಕು. ಇದರ ಜೊತೆಗೆ ಬೆಳೆ ಹಾನಿ ಸಮೀಕ್ಷೆ ಮಾಡುವುದು ಕೂಡ ಅಷ್ಟೇ ಅವಶ್ಯವಿದ್ದು, ಭೂಮಿಯಲ್ಲಿ ತೇವಾಂಶ ಕಡಿಮೆಯಾದ ತಕ್ಷಣ ಕೃಷಿ ಅಧಿಕಾರಿಗಳು ಮುಂದಿನ 10-12 ದಿನಗಳಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವ ಕೆಲಸವಾಗಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಪಿ.ಸುನೀಕುಮಾರ್ ಸಭೆಗೆ ಮಾಹಿತಿ ನೀಡಿ, ಪ್ರಾಥಮಿಕ ವರದಿ ಪ್ರಕಾರ ಸೆ.1 ರಿಂದ 16 ರವರೆಗೆ ಜಿಲ್ಲೆಯಲ್ಲಿ ಎ ಕೆಟಗರಿಯ 489 ಮನೆ ಹಾಗೂ ಬಿ ಮತ್ತು ಸಿ ಕೆಟಗರಿಯ 860 ಮನೆಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. 326 ಹಳ್ಳಿಗಳ 18929 ಹೆಕ್ಟೇರ್ ಪ್ರದೇಶ ಕೃಷಿ ಮತ್ತು 3823 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಗಳು ನಾಶವಾಗಿವೆ. 223 ಮನೆಗಳಿಗೆ ನೀರು ನುಗ್ಗಿದ್ದು, 22 ಲಕ್ಷ ರೂ.ಪರಿಹಾರ ಬಿಡುಗಡೆಯಾಗಿರುತ್ತದೆ. 4 ಜೀವ ಹಾನಿಯಾಗಿದ್ದು, ಈಗಾಗಲೇ ಪರಿಹಾರ ಧನ ವಿತರಿಸಲಾಗಿದೆ ಎಂದರು.

ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾದ ಹಾನಿ ಕುರಿತಾದ ವಿಡಿಯೋವನ್ನು ಸಭೆಗೆ ಮುನ್ನ ಸಚಿವರು ವೀಕ್ಷಿಸಿದರು. ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net