

ಶಿರಸಿ: ಮಲೆನಾಡಿನ 12 ಜಿಲ್ಲೆಗಳಲ್ಲಿ ಕಾಲು ಸಂಕ ನಿರ್ವಣಕ್ಕೆ ನಾವು ಆದ್ಯತೆ ನೀಡಿದ್ದೇವೆ. ಕಳೆದ ಆರ್ಥಿಕ ವರ್ಷದಲ್ಲಿ 20 ಕೋಟಿ ರೂ. ಹಣ ನೀಡಿದ್ದರೆ ಈ ವರ್ಷದ ಬಜೆಟ್ನಲ್ಲಿ 50 ಕೋಟಿ ರೂ. ಹಣ ನೀಡಿದ್ದೇವೆ. ನಮ್ಮ ಸರ್ಕಾರದ ಅವಧಿ ಮುಕ್ತಾಯಗೊಳ್ಳುವುದರ ಒಳಗಾಗಿ ಮಲೆನಾಡಿನ ಕಾಲು ಸಂಕಗಳ ಸಮಸ್ಯೆ ಬಗೆಹರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕಾಲು ಸಂಕಗಳ ನಿರ್ಮಾಣ ನಿರೀಕ್ಷಿಸಿದಂತೆ ಆಗಲಿಲ್ಲ. ಹೀಗಾಗಿ, ಕಾಲು ಸಂಕಗಳ ಬೇಡಿಕೆ ಕೂಡ ಅಧಿಕ ಪ್ರಮಾಣದಲ್ಲಿದೆ. ಶಿರಸಿ ಸಿದ್ದಾಪುರ ತಾಲೂಕಿನಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಕಾಲು ಸಂಕಗಳ ನಿರ್ಮಾಣ ಆಗಬೇಕಾಗಿದೆ ಎಂದರು.
ಗುತ್ತಿಗೆದಾರರ ಹಳೆಯ ಬಿಲ್ಗಳನ್ನು ನಾವು ಹಂತ ಹಂತವಾಗಿ ನೀಡುತ್ತಿದ್ದೇವೆ. 2024ರ ಡಿಸೆಂಬರ್ವರೆಗಿನ ಬಿಲ್ಗಳ ಹಣವನ್ನು ಅವರಿಗೆ ಪಾವತಿಸಿದ್ದೇವೆ. ಉಳಿದ ಹಣವನ್ನು ಹಂತ ಹಂತವಾಗಿ ನೀಡುತ್ತೇವೆ ಎಂದರು.
ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವಂತೆ ಕಾರ್ಯಕರ್ತರಿಂದ ಒತ್ತಡವಿದೆ. ನಾವು ಪಟ್ಟಿ ಕಳಿಸಿ ಆರು ತಿಂಗಳಾಗಿದೆ. ಶೀಘ್ರದಲ್ಲಿಯೇ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದರು.
ಜಾತಿ ಗಣತಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಅವರೂ ಸಮೀಕ್ಷೆ ಮಾಡಲಿ. ನಾವು ಒಳ ಮೀಸಲಾತಿಗೆ ಸಮೀಕ್ಷೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಸಲಹೆ, ಸೂಚನೆ ನೀಡಲು ತಿಳಿಸಿದ್ದಾರೆ. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಅರಣ್ಯ ಅತಿಕ್ರಮಣದಾರರನ್ನು ಇನ್ನೊಂದು ಬಾರಿ ಸಮೀಕ್ಷೆ ಮಾಡಲು ಸರ್ಕಾರ ಹೇಳಿದೆ. ಈ ಮೊದಲು ಅತಿಕ್ರಮಣದಾರರ ವರದಿಯನ್ನು ಅರಣ್ಯ ಇಲಾಖೆ ಸ್ಥಳೀಯ ಮುಖಂಡರ ಜೊತೆ ರ್ಚಚಿಸದೇ ಸಲ್ಲಿಸಿತ್ತು. ಇದರಿಂದಾಗಿ ಈ ರೀತಿ ಗೊಂದಲಗಳು, ಅರ್ಜಿ ತಿರಸ್ಕಾರವಾಗುವಿಕೆ ನಡೆದಿದೆ. ಈ ಬಾರಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಚರ್ಚೆ ನಡೆಸಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಪ್ರಮುಖರಾದ ದೀಪಕ ದೊಡ್ಡೂರು, ವಿ.ಎಸ್. ಪಾಟೀಲ ಇತರರಿದ್ದರು.